ಒಟ್ಟು 170 ಕಡೆಗಳಲ್ಲಿ , 1 ವಚನಕಾರರು , 151 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸುಂದರವನೆಸಗು ಜೀವನದ ಸಾಹಸದಿಂದೆ |ಕುಂದಿಲ್ಲವದಕೆ ಸಾಹಸಭಂಗದಿಂದೆ ||ಮುಂದಕದು ಸಾಗುವುದು ಮರಳಿ ಸಾಹಸದಿಂದೆ |ಚೆಂದ ಧೀರೋದ್ಯಮವೆ - ಮಂಕುತಿಮ್ಮ ||
ಸುಲಭವೇನಲ್ಲ ನರಲೋಕಹಿತನಿರ್ಧಾರ |ಬಲಕೆ ನೋಳ್ವರ್ ಕೆಲರು; ಕೆಲರೆಡಕೆ ನೋಳ್ವರ್ ||ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ |ನೆಲೆಗೊತ್ತು ಹಿತಕೆಲ್ಲಿ? - ಮಂಕುತಿಮ್ಮ ||
ಸುಳ್ಳಲ್ಲ ಕಥೆಯ ತಿರುಕನು ಕಂಡ ಸವಿಗನಸು |ಚೆಲ್ಲಿತಲ್ಲವೆ ಹಿಟ್ಟು ಘಟವನವನೊದೆಯೆ? ||ಜಳ್ಳು ಸುಖದುಃಖವಿರಬಹುದಾದೊಡದರ ಮೊನೆ |ಮುಳ್ಳಹುದು ಜೀವಕ್ಕೆ - ಮಂಕುತಿಮ್ಮ ||
ಸೆಳೆಯುತಿರುವುದದೊಂದು ಹೊರಬೆಡಗಿನೆಳೆಗಳೆ |ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ||ಎಳೆದಾಟವೇಂ ಋಣಾಕರ್ಷಣೆಯೊ? ಸೃಷ್ಟಿವಿಧಿ |ಯೊಳತಂತ್ರವೋ? ನೋಡು - ಮಂಕುತಿಮ್ಮ ||
ಸೈನಿಕನು ನೀನು; ಸೇನಾಧಿಪತಿಯೆಲ್ಲಿಹನೊ! |ಆಣತಿಯ ಕಳುಹುತಿಹನದನು ನೀನರಿತು ||ಜಾಣಿನಧಟಿಂ ಪೋರು; ಸೋಲುಗೆಲವವನೆಣಿಕೆ |ಕಾಣಿಸದನಾಳ್ಕೆಯದು - ಮಂಕುತಿಮ್ಮ ||
ಸೊಟ್ಟುಗಳ ನೆಟ್ಟಗಾಗಿಪ ಯತ್ನ ಲೋಕದಲಿ |ಸೃಷ್ಟಿಯಾದಿಯಿನಾಗುತಿಹುದು; ಫಲವೇನು? ||ಹೊಟ್ಟೆ ನೋವಿಳಿಯುತಿರೆ ರಟ್ಟೆ ನೋವೆನ್ನುವುದು |ಮಟ್ಟಸವೆ ತಿರೆಹರವು? - ಮಂಕುತಿಮ್ಮ ||
ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ |ಕುಂದುವಡೆಯದ ಸತ್ಯವಿಳೆಯೊಳಿನ್ನೆಲ್ಲಿ? ||ಗಂಧಾನಿಲಂಗಳವು ಪರಸತ್ತ್ವಪುಷ್ಪದವು |ಸಂದೇಹವೇನೆಲವೊ - ಮಂಕುತಿಮ್ಮ ||
ಸ್ಥೂಲ ಸೂಕ್ಷ್ಮವಿವೇಕರಹಿತೇಷ್ಟ ಬಂಧುಜನ |ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ||ಸಾಲವನು ನಿನ್ನಿಂದ ಸಲಿಸಿಕೊಳಬಂದವರು |ತಾಳುಮೆಯಿನವರೊಳಿರು - ಮಂಕುತಿಮ್ಮ ||
ಹರಡುವುದು ಸಾಜ ವಾಯುಗೆ ಸೈಸದದು ತಡೆಯನ್ |ಉರುಳಿಪುದದೆಲ್ಲವನು ತಡೆಗಳಿಲ್ಲದಿರೆ ||ನರನ ಸ್ವತಂತ್ರಗತಿಯಂತು ಹಿತಮಿತವಿರಲು |ಅರಸೊ ಮಿತಿಯಾಯತಿಯ - ಮಂಕುತಿಮ್ಮ ||
ಹರಿಗೆ ನಿನ್ನನುರಾಗವೆಲ್ಲವನು ಸಲ್ಲಿಸೆನೆ |ಮರುನುಡಿಯ ನುಡಿವನೇನ್ ಒಡಲ ತೋರದನು? ||ಪರಿತಪಿಸುವುದು ಜೀವ ಜೀವಸರಸವನೆಳಸಿ |ನರಧರ್ಮಸೂಕ್ಷ್ಮವಿದು - ಮಂಕುತಿಮ್ಮ ||
ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ |ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ |ತಳಮಳಿಸುತಿದೆ ಲೋಕ - ಮಂಕುತಿಮ್ಮ ||
ಹಳೆಯ ಮಲೆ ಹಳೆಯ ನೆಲವಾದೊಡೆಯುಮೊರತೆ ಮಳೆ |ಹೊಳೆನೀರನಾವಗಂ ಪೊಸದಾಗಿಸುವವೊಲ್ ||ಹಳೆಯ ಕರ್ಮವ ಹೊಸದು ಕೊಚ್ಚಿ ಪೌರುಷನದಿಯ |ಬೆಳೆಯಿಪುದು ನವತೆಯಲಿ - ಮಂಕುತಿಮ್ಮ ||
ಹಾಲಿನೊಳು ಬೆಣ್ಣೆ ಕಡಲೊಳಗೆ ನೀರ್ಗಲ್ಲವೊಲು |ತೇಲುವುದಮೇಯಸತ್ತ್ವದಲಿ ಮೇಯ ಜಗ ||ಮೂಲದಶೆಯೊಳಗೊಂದು; ಮಾಪನದ ಬಗೆಗೆರಡು |ಗಾಳಿಯುಸಿರುಗಳಂತೆ - ಮಂಕುತಿಮ್ಮ ||
ಹುರಿಯುರುಳೆ ಹಾವಲ್ಲವಾದೊಡಂ ಮಬ್ಬಿನಲಿ |ಹರಿದಾಡಿದಂತಾಗೆ ನೋಳ್ಪವಂ ಬೆದರಿ ||ಸುರಿಸುವಾ ಬೆವರು ದಿಟ; ಜಗುವುಮಂತುಟೆ ದಿಟವು |ಜರೆಯದಿರು ತೋರ್ಕೆಗಳ - ಮಂಕುತಿಮ್ಮ ||
ಹುಲಿಯ ಕೆಣಕುವುದು ಹುಲಿ; ಕಪಿಯನಣಕಿಪುದು ಕಪಿ |ಹುಲಿಕಪಿಗಳವಿತಿರದ ನರಜಂತುವೆಲ್ಲಿ? ||ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು |ಕುಲುಕದಿರು ಬಾಲವನು - ಮಂಕುತಿಮ್ಮ ||