ಒಟ್ಟು 946 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ |ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ||ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು |ಇಳೆಯೊಳಗೊಂದು ಸೊಗ - ಮಂಕುತಿಮ್ಮ ||
ಏಕದಿಂದಲನೇಕ ಮತ್ತನೇಕದಿನೇಕ |ವೀ ಕ್ರಮವೆ ವಿಶ್ವದಂಗಾಂಗಸಂಬಂಧ ||ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ |ಸಾಕಲ್ಯದರಿವಿರಲಿ - ಮಂಕುತಿಮ್ಮ ||
ಏಕವಾಗವೆ ದೈವಚಿತ್ತ ನರಚಿತ್ತಗಳು? |ಏಕೆನ್ನ ಮನವನಾಳನು ಲೋಕದೊಡೆಯಂ? ||ಬೇಕೆನಿಪುದೊಂದೆನಗೆ; ವಿಧಿ ಗೆಯ್ವುದಿನ್ನೊಂದು |ಈ ಕುಟಿಲಕೇಂ ಮದ್ದು? - ಮಂಕುತಿಮ್ಮ ||
ಏನಾದೊಡೆಯುಮಪ್ಪುದುಂಟು; ಸಿದ್ಧನಿರದಕೆ |ಭಾನು ತಣುವಾದನು; ಸೋಮ ಸುಟ್ಟಾನು ||ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು |ಮೌನದಲಿ ಸಿದ್ಧನಿರು - ಮಂಕುತಿಮ್ಮ ||
ಏನಾದೊಡೇನು? ನೀನೆಲ್ಲಿ ಪೋದೊಡಮೇನು? |ಪ್ರಾಣವೇಂ ಮಾನವೇನಭ್ಯುದಯವೇನು? ||ಮಾನವಾತೀತವೊಂದೆಲ್ಲವನು ನುಂಗುವುದು |ಜಾನಿಸದನಾವಗಂ - ಮಂಕುತಿಮ್ಮ ||
ಏನಾನುಮಂ ಮಾಡು ಕೈಗೆ ದೊರತುಜ್ಜುಗವ |ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ ||ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ |ತಾಣ ನಿನಗಿಹುದಲ್ಲಿ - ಮಂಕುತಿಮ್ಮ ||
ಏನು ಜೀವನದರ್ಥ? ಏನು ಪ್ರಪಂಚಾರ್ಥ? |ಏನು ಜೀವಪ್ರಪಂಚಗಳ ಸಂಬಂಧ? ||ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? |ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ ||
ಏನು ಪ್ರಪಂಚವಿದು! ಏನು ಧಾಳಾಧಾಳಿ! |ಏನದ್ಭುತಾಪಾರಶಕ್ತಿನಿರ್ಘಾತ! ||ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |ಏನರ್ಥವಿದಕೆಲ್ಲ? - ಮಂಕುತಿಮ್ಮ ||
ಏನು ಭೈರವಲೀಲೆಯೀ ವಿಶ್ವವಿಭ್ರಮಣೆ! |ಏನು ಭೂತಗ್ರಾಮನರ್ತನೋನ್ಮಾದ! ||ಏನಗ್ನಿ ಗೋಳಗಳು! ಏನಂತರಾಳಗಳು! |ಏನು ವಿಸ್ಮಯ ಸೃಷ್ಟಿ? - ಮಂಕುತಿಮ್ಮ ||
ಏನೆ ನಿಜವಿರಲಿ ಮತ್ತೇನೆ ಸುಳ್ಳಾಗಿರಲಿ |ನಾನೆನಿಪ್ಪಾತ್ಮವೊಂದಿರುವುದನುಭವಿಕ ||ಹಾನಿಗಾವಾತನಾತ್ಮವನುಮಂ ಕೆಡಹದಿರು |ಧ್ಯಾನಿಸಾತ್ಮದ ಗತಿಯ - ಮಂಕುತಿಮ್ಮ ||
ಏನೇನು ಹಾರಾಟ ಸುಖಕೆಂದು ಲೋಕದಲಿ |ತಾನಾಗಿ ಗಾಳಿವೊಲ್ ಬಂದ ಸುಖವೆ ಸುಖ ||ನೀನೆ ಕೈ ಬೀಸಿಕೊಳೆ ನೋವು ಬೆವರುಗಳೆ ಫಲ |ಮಾಣು ಮನದುಬ್ಬಸವ - ಮಂಕುತಿಮ್ಮ ||
ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು |ಏನನೋ ನೆನೆದು ಸರ್ರೆಂದು ಹಾರುವುದು ||ಬಾನೊಳಾಡುವ ಹಕ್ಕಿಗಿದುವೆ ನಿತ್ಯಾನುಭವ |ನೀನದನು ಮೀರಿಹೆಯ? - ಮಂಕುತಿಮ್ಮ ||
ಏಸು ಸಲ ತಪವಗೈದೇಸು ಬನ್ನವನಾಂತು |ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್? ||ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ |ಲೇಸಾಗಿಸಾತ್ಮವನು - ಮಂಕುತಿಮ್ಮ ||
ಏಳಿಸುವುದೊಂದು ಹೊರಸುಳಿವೆನ್ನ ಹೃದಯದಲಿ |ಗಾಳಿಸುಂಟರೆಯನದು ಹರಣಗಳ ಕುಲುಕಿ ||ಬಾಳನಲ್ಲಾಡಿಪುದು ಬೇರಿಂದ ತುದಿವರೆಗೆ |ಧೂಳದರೊಳೀ ಜನ್ಮ - ಮಂಕುತಿಮ್ಮ ||
ಐಕ್ಯ ನಾನಾತ್ವಗಳು; ನಿಯತಿ ಸ್ವತಂತ್ರಗಳು |ತರ್ಕ್ಯ ನಿಸ್ತರ್ಕ್ಯಗಳು ಬೆರೆತು ಚಿತ್ರದಲಿ ||ಶಕ್ಯಮುಂ ಪುರುಷತಂತ್ರಕ್ಕಶಕ್ಯಮುಮಾದ |ಸಿಕ್ಕುಗಳ ಕಂತೆ ಜಗ - ಮಂಕುತಿಮ್ಮ ||