ಒಟ್ಟು 946 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? |ಬಗೆದು ಬಿಡಿಸುವರಾರು ಸೋಜಿಗವನಿದನು? ||ಜಗವ ನಿರವಿಸಿದ ಕೈಯೊಂದಾದೊಡೇಕಿಂತು |ಬಗೆಬಗೆಯ ಜೀವಗತಿ? - ಮಂಕುತಿಮ್ಮ ||
ಒಟ್ಟಿನಲಿ ತತ್ತ್ವವಿದು : ವಿಕಟರಸಿಕನೊ ಧಾತ |ತೊಟ್ಟಿಲನು ತೂಗುವನು; ಮಗುವ ಜಿಗಟುವನು ||ಸಿಟ್ಟನ್ ಒಡವುಟ್ಟುಗಳೊಳಾಗಿಪನು; ಸೋಲಿಪನು |ತುತ್ತು ವಿಕಟಿಗೆ ನಾವು - ಮಂಕುತಿಮ್ಮ ||
ಒಡರಿಸುವನೆಲ್ಲವನ್; ಅದಾವುದುಂ ತನದಲ್ಲ |ಬಿಡನೊಂದನುಂ ರಾಜ್ಯ ತನದಲ್ಲವೆಂದು ||ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ |ಕಡುಯೋಗಿ ಭರತನಲ? - ಮಂಕುತಿಮ್ಮ ||
ಒಡೆಯದಿರು ತಳಹದಿಯ ಸರಿವಡಿಪೆನದನೆಂದು |ಸಡಲಿಸುವ ನೀಂ ಮರಳಿ ಕಟ್ಟಲರಿತವನೇಂ? ||ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ? |ದುಡುಕದಿರು ತಿದ್ದಿಕೆಗೆ - ಮಂಕುತಿಮ್ಮ ||
ಒಡೆಯನಾವೆಡೆ ಸಾರ್ದನೆಂದು ಪದವಾಸನೆಯ |ತಡಕಿ ಮೂಸುತ ಶುನಕನಲೆದಾಡುವಂತೆ ||ಬಡಜಗವನೊಳಿತಕೆಂದತ್ತಿತ್ತ ಪುಡುಕಿಸುವ |ಬೆಡಗು ಶಿವನೊಡವೆಯದೊ - ಮಂಕುತಿಮ್ಮ ||
ಒಡೆಯನೆಂದೋ ಬಂದು ಕೇಳ್ವನದಕುತ್ತರವ |ಕೊಡಬೇಕು ತಾನೆನುವವೊಲು ಋಜುತೆಯಿಂದ ||ಒಡಲ; ಜಾಣಿನ; ಜೀವಶಕ್ತಿಗಳನೆಲ್ಲವನು |ಮುಡುಪುಕೊಟ್ಟನು ಭರತ - ಮಂಕುತಿಮ್ಮ ||
ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ |ತೃಣ ಮೊಳೆಯುವುದು ಮರಳಿ ಹನಿಯೆರಡು ಬೀಳೆ ||ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ |ಕುಣಿವುದನುಕೂಲ ಬರೆ - ಮಂಕುತಿಮ್ಮ ||
ಒಂದಗಳು ಹೆಚ್ಚಿರದು; ಒಂದಗಳು ಕೊರೆಯಿರದು |ತಿಂದು ನಿನ್ನನ್ನಋಣ ತೀರುತಲೆ ಪಯಣ ||ಹಿಂದಾಗದೊಂದು ಚಣ; ಮುಂದಕುಂ ಕಾದಿರದು |ಸಂದ ಲೆಕ್ಕವದೆಲ್ಲ - ಮಂಕುತಿಮ್ಮ ||
ಒಂದಿಹುದುಪಾಯವೋರೊರ್ವನರೆಗಣ್ಣುಗಳು |ಮೊಂದೊಂದು ಸತ್ಯಾಂಶಕಿರಣಗಳ ಪಿಡಿದು ||ಒಂದುಗೂಡಿದೊಡವರ್ಗಳರಿವನೆಲ್ಲವನಾಗ |ಮುಂದು ಸಾಗುವೆವಿನಿತು - ಮಂಕುತಿಮ್ಮ ||
ಒಂದು ಕಡೆ ಚಿಗುರುತಲಿ; ಒಂದು ಕಡೆ ಬಾಡುತಲಿ |ಕಂದುತಿರೆ ಕೊಂಬೆ; ಮುಂಡದಲಿ ಹಬ್ಬುತಲಿ ||ಎಂದೆಂದುಮಶ್ವತ್ಥ ಹಳೆಹೊಸದು; ತಾನದಾ |ಸ್ಪಂದನವೊ ಬ್ರಹ್ಮನದು - ಮಂಕುತಿಮ್ಮ ||
ಒಂದು ಕಣ್ಣಳುವಂದು ಮತ್ತೊಂದು ತಳ್ಕೈಸಿ |ಅಂದ ಚೆಂದಗಳ ಜನವರಸುವುದು ಬಾಳೊಳ್ ||ಬಂಧುಮೋಹವೊ ಯಶವೊ ವೈರವೊ ವೈಭವವೊ |ಬಂಧಿಪುದು ಜಗಕವರ - ಮಂಕುತಿಮ್ಮ ||
ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |ಸಂದಿಹುದು ಚಿರನವತೆಯಶ್ವತ್ಥಮರಕೆ ||ಎಂದೆಂದುಮಂತಿರುವುದೀ ವಿಶ್ವವೃಕ್ಷವದ |ರೊಂದು ರೆಂಬೆಯೊ ನೀನು - ಮಂಕುತಿಮ್ಮ ||
ಒಂದು ಜನ್ಮದ ಲೆಕ್ಕವಂದೆ ಮುಗಿವಂತೇಕೆ |ಸಂಧಿಸವು ಕಾಲ ಕಾರಣ ಕರಣ ಕಾರ್ಯ? ||ಮುಂದಕೇತಕೆ ಮಿಗಿಸಿ ಕರ್ಮಋಣಶೇಷಗಳ |ಬಂಧಿಪನು ವಿಧಿ ನಿನ್ನ? - ಮಂಕುತಿಮ್ಮ ||
ಒಂದುದಿನವೌತಣಕೆ; ಉಪವಾಸಕಿನ್ನೊಂದು |ಸಂದಣಿಯ ದಿನವೊಂದು; ಬಿಡುವು ದಿನವೊಂದು ||ಹೊಂದಿರ್ದೊಡುಭಯಮುಂ ಜೀವಕದು ಸುಖ ಚಲನ |ಒಂದುಕಾಲ್ನಡೆ ಸುಖವೆ? - ಮಂಕುತಿಮ್ಮ ||
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು |ಬಂದುದೀ ವೈಷಮ್ಯ? - ಮಂಕುತಿಮ್ಮ ||