ಒಟ್ಟು 950 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕ್ಷಣದಿಂದನುಕ್ಷಣಕೆ; ದಿನದಿಂದ ಮರುದಿನಕೆ |ಅನಿತನಿತರೊಳೆ ಬದುಕುತಾಯುವನು ಕಳೆವಾ ||ಮನದ ಲಘುಸಂಚಾರವೊಂದು ಯೋಗದುಪಾಯ |ಶುನಕೋಪದೇಶವದು - ಮಂಕುತಿಮ್ಮ ||
ಕ್ಷಣವದೊಂದೆ ಅನಂತಕಾಲ ತಾನಾಗುವುದು |ಅನುಭವಕೆ ಸತ್ತ್ವ ಶಿವ ಸುಂದರಗಳಮರೆ ||ಮನ ತುಂಬುಶಶಿಯಾಗಿ; ನೆನಪಮೃತವಾಗುವುದು |ಕ್ಷಣದೊಳಕ್ಷಯ ಕಾಣೊ - ಮಂಕುತಿಮ್ಮ ||
ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ |ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ ||ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ |ವಣುವಣುವೆ ಬಿಗಿಯುವುವೊ - ಮಂಕುತಿಮ್ಮ ||
ಕ್ಷಮೆ ದೋಷಿಗಳಲಿ; ಕೆಚ್ಚೆದೆ ವಿಧಿಯ ಬಿರುಬಿನಲಿ |ಸಮತೆ ನಿರ್ಮತ್ಸರತೆ ಸೋಲ್ಗೆಲವುಗಳಲಿ ||ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು |ಭ್ರಮೆಯೊ ಮಿಕ್ಕೆಲ್ಲ ತಪ - ಮಂಕುತಿಮ್ಮ ||
ಕ್ಷಿತಿಚಕ್ರ ರವಿಚಕ್ರ ಋತುಚಕ್ರಗಳಿಗಿಹುದು |ಮಿತವೃತ್ತಿ; ನರನಿಗಂತೆಯೆ ಕರ್ಮನಿಯತಿ ||ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ |ಅತಿಚರಿತೆ ಪ್ರಕೃತಿಯಲಿ - ಮಂಕುತಿಮ್ಮ ||
ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? |ಮತಿಮನಂಗಳ ಕೃಷಿತಪಃಫಲವುಮಂತು ||ಸತತಕೃಷಿ; ಬೀಜಗುಣ; ಕಾಲವರ್ಷಗಳೊದವೆ |ಪ್ರತಿಭೆ ವಿಕಸಿತವಹುದೊ - ಮಂಕುತಿಮ್ಮ ||
ಕ್ಷೀರಾನ್ನದಿಂದೆ ನರಪುಷ್ಟಿ; ಹಸುವಿಂ ಪಾಲು |ಪೈರು ಬೆಳಸಿಂದೆ ಹಸು; ಪೈರುಗಳ್ಗೂರ ||ಸಾರದಿಂ ಪುಷ್ಟಿ; ಇಂತುಣಿಸುಮುಂಬನುಮೊಂದು |ಪಾಲೇನು? ಪೇಲೇನು? - ಮಂಕುತಿಮ್ಮ ||
ಕ್ಷುತ್ತುಮಮತೆಗಳು ಜೀವಕೆ ಕುಲಿಮೆಸುತ್ತಿಗೆಗಳ್ |ಉತ್ತಮವದೆನಿಪುವುವು ಕಿಟ್ಟಗಳ ಕಳೆದು ||ಚಿತ್ತಸಂಸ್ಕಾರಸಾಧನವಯ್ಯ ಸಂಸಾರ |ತತ್ತ್ವಪ್ರವೃತ್ತಂಗೆ - ಮಂಕುತಿಮ್ಮ ||
ಖದ್ಯೋತನಂತೆ ಬಿಡುಗೊಳದೆ ಧರ್ಮವ ಚರಿಸು |ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು ||ಗೆದ್ದುದೇನೆಂದು ಕೇಳದೆ; ನಿನ್ನ ಕೈಮೀರೆ |ಸದ್ದುಮಾಡದೆ ಮುಡುಗು - ಮಂಕುತಿಮ್ಮ ||
ಗಗನ ತಲೆನವಿರಾಗೆ ಪೆರೆತಾರೆ ಹೂವಾಗೆ |ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ||ನಗುನಗುವ ಬೊಬ್ಬಿಡುವ ಜೀವತಾಂಡವರಸಿಕ |ಭಗವಂತ ಶಿವರುದ್ರ - ಮಂಕುತಿಮ್ಮ ||
ಗಗನ ಬಿಸಿಗವಸಾಗಿ; ಕೆರೆಗಳಾವಿಗೆಯಾಗಿ |ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ||ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ |ಮುಗಿಲವೊಲು ದೈವಕೃಪೆ - ಮಂಕುತಿಮ್ಮ ||
ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ |ಮುಗಿವ ತರಣಿಯ ರಕ್ತ ಹಿತವೆನಿಸದೇಕೊ! ||ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ |ಬಗೆವೆನ್ನ ಮನಸಿನೊಳೊ? - ಮಂಕುತಿಮ್ಮ ||
ಗಣನೆಗೆಟುಕದ ಗುಣಗಳಾತ್ಮದವವರ್ಣ್ಯಗಳು |ಮನದ ದೇಹದ ಜೀವದೆಲ್ಲ ಕರಣಗಳಾ ||ಅನುಭವದ ಮುಕುರದೊಳ್ ಪ್ರತಿಫಲಿಸೆ ತನ್ನದೊಂ- |ದಣುವದುವೆ ಸುಂದರವೊ - ಮಂಕುತಿಮ್ಮ ||
ಗತಿಯೇನು ಎನಗೆನುತ ಕೇಳ್ವವರೆ ಎಲ್ಲರುಂ |ಹಿತವೆಂತು ಜಗಕೆಂದು ಕೇಳುವವರಾರು? ||ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ |ಪಥ ಮುಕ್ತಿಗಾಗಳೇ - ಮಂಕುತಿಮ್ಮ ||
ಗರಡಿ ಸಾಮಿಂದೆ ನೀನೆದುರಾಳ ಗೆಲದೊಡೇಂ? |ಬರದಿಹುದೆ ನಿನಗನಿತು ಕಾಯಾಂಗಪಟುತೆ? ||ವರ ಸದ್ಯಕ್ಕಿಲ್ಲದೊಡೆ ಬರಿದಾಗುವುದೆ ಪೂಜೆ? |ಪರಿಶುದ್ಧ ಮನವೆ ವರ - ಮಂಕುತಿಮ್ಮ ||