ಒಟ್ಟು 34 ಕಡೆಗಳಲ್ಲಿ , 1 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನೆನೆನೆನೆದು ಗಹನವನು; ಜೀವನರಹಸ್ಯವನು |ಮನವ ಬಳಲಿಸಿ ಸೋಲಿಸಿರುವ ತತ್ತ್ವವನು ||ಮನನದೇಕಾಂತದಲಿ ಮೌನದ ಧ್ಯಾನದಲಿ |ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ ||
ಪಂಚಕವೊ; ಪಂಚ ಪಂಚಕವೊ ಮಾಭೂತಗಳ |ಹಂಚಿಕೆಯನರಿತೇನು? ಗುಣವ ತಿಳಿದೇನು? ||ಕೊಂಚ ಕೊಂಚಗಳರಿವು ಪೂರ್ಣದರಿವಾದೀತೆ? |ಮಿಂಚಿದುದು ಪರರತತ್ತ್ವ - ಮಂಕುತಿಮ್ಮ ||
ಪರಮಲಾಭವ ಗಳಿಸೆ ಜೀವಿತವ್ಯಾಪಾರ- |ಕಿರಬೇಕು ಮೂಲಧನವದು ತತ್ತ್ವದೃಷ್ಟಿ ||ಚಿರಲಾಭ ಜಗದಾತ್ಮಲೀಲಾವಿಹಾರಸುಖ |ಧರೆಯ ಸುಖ ಮೇಲ್ಬಡ್ಡಿ - ಮಂಕುತಿಮ್ಮ ||
ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ |ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ ||ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ |ತಿಳಿಮನದೆ ನೋಳ್ಪರ್ಗೆ - ಮಂಕುತಿಮ್ಮ ||
ಬರಿಯ ಬುದ್ಧಿವಿಮರ್ಶೆಗರಿದು ಜೀವನತತ್ತ್ವ |ಪರಿಶೋಧಿಸುವರಾರು ಬುದ್ಧಿಋಜುತೆಯನು? ||ಸ್ಫುರಿಸುವುದದೆಂದೊ ತಾನೇ ಮಿಂಚುಬಳ್ಳಿವೊಲು |ಪರತತ್ತ್ವ ಮನದೊಳಗೆ - ಮಂಕುತಿಮ್ಮ ||
ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು |ಪರತತ್ತ್ವವನು; ಬೇಕು ಬೇರೆ ಕಣ್ಣದಕೆ ||ಚಿರದ ಮಮತಾವೇಷ್ಟಿತದ ಪೊರೆಯ ಪರಿದಂದು |ಅರಳ್ವುದರಿವಿನ ಕಣ್ಣು - ಮಂಕುತಿಮ್ಮ ||
ಬಹುರಹಸ್ಯವೊ ಸೃಷ್ಟಿ; ಬಹುರಹಸ್ಯವೊ ಜೀವ |ಅಹುದದಲ್ಲವಿದೆಂಬ ವಾದ ಬರಿ ಹರಟೆ ||ಗುಹೆಯೊಳಿಹುದೆಲ್ಲ ತತ್ತ್ವಗಳ ತತ್ತ್ವದ ಮೂಲ |ಬಹಿರಂತರ ರಹಸ್ಯ - ಮಂಕುತಿಮ್ಮ ||
ಭಕ್ತಿ ನಂಬುಗೆ ಸುಲಭ; ಭಜನೆ ವಂದನೆ ಸುಲಭ |ತತ್ತ್ವಶೋಧನೆ ಕಷ್ಟ; ಮತಿಕಾರ್ಯ ಕಷ್ಟ ||ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ |ಹತ್ತುವನು ತಾಪಸಿಯೊ - ಮಂಕುತಿಮ್ಮ ||
ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು? |ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು? ||ನಿತ್ಯಸತ್ತ್ವವೆ ಭಿತ್ತಿ; ಜೀವಿತ ಕ್ಷಣಚಿತ್ರ |ತತ್ತ್ವವೀ ಸಂಬಂಧ - ಮಂಕುತಿಮ್ಮ ||
ಮಾರ್ಗಣೆಯೆ ಮುಖ್ಯ; ಲಭ್ಯದ ಮಾತದಂತಿರಲಿ |ಸ್ವರ್ಗವನು ಭುವಿಗಿಳಿಸಬಲ್ಲವನದಾರು? ||ಅರ್ಗಲ ವಿಹೀನ ಸರ್ವಾರ್ಥ ಸಹಭಾಗಿತೆಯೆ |ಅರ್ಘಾರ್ಹತತ್ತ್ವವೆಲೊ - ಮಂಕುತಿಮ್ಮ ||
ವನಜಂತುಗಳ ಸಸ್ಯಮೂಲಿಕಾಹಾರದಿಂ |ಗುಣವನರಿತವರಾದಿವೈದ್ಯರೌಷಧದೊಳ್ ||ಒಣತರ್ಕಗಳಿನೇನು? ಜೀವನದ ವಿವಿಧರಸ- |ದನುಭವದಿ ತತ್ತ್ವವೆಲೊ - ಮಂಕುತಿಮ್ಮ ||
ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ |ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |ತತ್ತ್ವದರ್ಶನವಹುದು - ಮಂಕುತಿಮ್ಮ ||
ಸರಿ ಹದದ ಕಾಳು ತಿರೆಯಪ್ಪಿದೊಡೆ ಮೊಳೆಯುವುದು |ಹುರಿದೊಡದು ಮೊಳೆಯದರಳಹುದು ಬಾಯ್ಸವಿಗೆ ||ಪರಮತತ್ತ್ವಜ್ಞಾನಿಯೊಡರಿಸುವ ಕರುಮಗಳು |ಮರುಬೆಳೆಗೆ ಬಿತ್ತಲ್ಲ - ಮಂಕುತಿಮ್ಮ ||
ಸುಟ್ಟಿ ಹಗ್ಗದ ಬೂದಿ ರೂಪಮಾತ್ರದಿ ಹಗ್ಗ |ಗಟ್ಟಿ ಜಗವಂತು ತತ್ತ್ವಜ್ಞಾನ ಸೋಕೆ ||ತೊಟ್ಟಿಹುದು ಲೋಕರೂಪವ; ತಾತ್ತ್ವಿಕನ ವೃತ್ತಿ |ಕಟ್ಟಿದವನಾತ್ಮವನು - ಮಂಕುತಿಮ್ಮ ||
ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು |ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ||ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು? |ಕಿತ್ತ ಗಾಳಿಯ ಪಟವೊ - ಮಂಕುತಿಮ್ಮ ||