ಒಟ್ಟು 50 ಕಡೆಗಳಲ್ಲಿ , 1 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ |ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ ||ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ |ಮೆರೆಯುವನು ಪರಬೊಮ್ಮ - ಮಂಕುತಿಮ್ಮ ||
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು |ತಿರೆಗುರುಳುವುದು ತನ್ನ ಬಲವ ತಾಂ ಕಳೆದು ||ನರನುಮಂತೆಯೆ ಸುತ್ತಿ ಸುತ್ತಿ ಕಡೆಗೊಂದು ದಿನ |ತೆರುವನಸ್ಥಿಯ ಧರೆಗೆ - ಮಂಕುತಿಮ್ಮ ||
ದೇವರದಿದೆಲ್ಲ ದೇವರಿಗೆಲ್ಲವೆಂದೊರಲು- |ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ ||ದಾವನ್ತಬಡುತ ತನ್ನಿಚ್ಛೆಯನೆ ಘೋಷಿಸುವ |ಭಾವವೆಂತಹ ಭಕುತಿ? - ಮಂಕುತಿಮ್ಮ ||
ನಯನಯುಗದಿಂ ಜಗವ ಪೊರೆದು; ನಿಟಿಲಾಕ್ಷಿಯಿಂ |ಲಯವಡಿಸುವುದದೇನು ಶಿವಯೋಗಲೀಲೆ? ||ಜಯಿಸಿ ಮದನನ ಬಳಿಕ ತನ್ನೊಡಲೊಳ್ ಉಮೆಯನ- |ನ್ವಯಿಸಿಕೊಂಡಿಹುದೇನು? - ಮಂಕುತಿಮ್ಮ ||
ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು? |ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ ||ಬಾಚಿಕೊಳಲಮೃತಕಣಗಳನ್ನೆಲ್ಲ ತನ್ನೆಡೆಗೆ |ಸಾಜ ಸೊಗವಾತ್ಮಂಗೆ - ಮಂಕುತಿಮ್ಮ ||
ನೀರ ನೆರೆ ತನ್ನೆದುರಿನಣೆಕಟ್ಟನೊದೆಯುವುದು |ಊರನದು ಕೊಚ್ಚುವುದು ಬದಿಯ ಕಟ್ಟದಿರೆ ||ಏರಿಗಳನಿಕ್ಕೆಲದಿ ನಿಲಿಸೆ ಹರಿವುದು ಸಮನೆ |ಪೌರುಷದ ನದಿಯಂತು - ಮಂಕುತಿಮ್ಮ ||
ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ |ಸ್ವೀಯಲಾಭಸ್ಮರಣೆಯುಳಿದು ವಿವದಿಗಳಾ ||ದಾಯನಿರ್ಣಯಕೆ ಯೋಜಿಸುವಂತೆ; ನೀಂ ಜಗದ |ಶ್ರೇಯಸ್ಸಿಗುಜ್ಜುಗಿಸು - ಮಂಕುತಿಮ್ಮ ||
ಪರಬೊಮ್ಮ ಜೀವಭೇದದಿ ನಿಜೈಕ್ಯವ ಮರೆಯೆ |ಮರಳಿ ತನ್ನೊಟ್ಟನವನರಸಲೆಚ್ಚರಿಸಲ್ ||ನರನಾರಿಯರ ಪರಸ್ಪರ ಮೋಹದಲಿ ಮಾಯೆ |ನಿರವಿಸಿಹಳಂಕುಶವ - ಮಂಕುತಿಮ್ಮ ||
ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ |ಚರಿಸುತಿರೆ ನರನದರ ಗುರುತನರಿಯದೆಯೆ ||ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ |ತೊರೆಯುವನು ದೊರೆತುದನು - ಮಂಕುತಿಮ್ಮ ||
ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ |ತಿರುಗಿಸಲು ತನ್ನ ದೃಷ್ಟಿಯನು ನಿರ್ಮಲದಿಂ ||ನಿರತಿಶಯ ಸುಖವಲ್ಲಿ; ವಿಶ್ವಾತ್ಮವೀಕ್ಷೆಯಲಿ |ಪರಸತ್ತ್ವಶಾಂತಿಯಲಿ - ಮಂಕುತಿಮ್ಮ ||
ಪೊಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನ |ತಡಕುವನು; ತನ್ನಾತ್ಮದುಣಿಸ ಮರೆಯುವನು ||ಒಡಲಿನಬ್ಬರವೇನು? ಆತುಮದ ನಾಣ್ಚೇನು? |ಪೊಡವಿಗಿದೆ ದುಮ್ಮಾನ - ಮಂಕುತಿಮ್ಮ ||
ಪ್ರಾಕ್ತನದ ವಾಸನೆಯೆ ಮನಕೆ ಮೊದಲಿನ ಮಂತ್ರಿ |ಯುಕ್ತಿಗಳ ತನಗೊಪ್ಪುವಂತೆ ತಿರುಗಿಪುದು ||ಸೂಕ್ತವೆನಿಪುದು ಸಹಜರುಚಿ ತನ್ನ ತರ್ಕವನೆ |ಗುಪ್ತದೊಳು ಕುಟಿಲವಿದು - ಮಂಕುತಿಮ್ಮ ||
ಬೆನ್ನಿನಗಲವನಳೆದು ಹೊರೆಗೆ ನೀನದನೊಡ್ಡು |ತನ್ನದೆನುವುದನು ವಿಧಿ ತಾನೆ ಕೊಳಲಿ ಬಿಡು ||ಬನ್ನ ನಿನಗೊದಗಲದನಾತ್ಮಶಿಕ್ಷಣವೆನ್ನು |ಮಾನ್ಯದೊಪ್ಪಂದವಿದು - ಮಂಕುತಿಮ್ಮ ||
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ- |ಸ್ತರಿಸುವಂದದಿ; ಸೃಷ್ಟಿ ತನ್ನ ಮೂಲವನು ||ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ |ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ ||
ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು |ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ||ಅರಸಿಕೊಳುವವೊಲಿಹುದು; ದೊರೆತವೋಲ್ ತೋರೆ ಸುಖ |ದೊರೆವವರೆಗಾಯಸವೊ - ಮಂಕುತಿಮ್ಮ ||