ಒಟ್ಟು 20 ಕಡೆಗಳಲ್ಲಿ , 1 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪಿಡಿ ಗಳಿಸು ಭುಜಿಸೊಡೆಯನಾಗೆನ್ನುವುದು ಮೋಹ |ಕೊಡು ಸಲಿಸು ಸೇವೆಗೈಯೆನ್ನುವುದು ಕರುಣೆ ||ಬಿಡು ನೀನು ನಾನುಗಳ; ವಿಶ್ವಾತ್ಮಪದವನೀ- |ನಡರೆನ್ನುವುದು ಶಾಂತಿ - ಮಂಕುತಿಮ್ಮ ||
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು |ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ||ಎದೆಯನುಕ್ಕಾಗಿಸುತ; ಮತಿಗದೆಯ ಪಿಡಿದು ನೀ- |ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ ||
ಬೆರಳುಗಳ ನೋಡವುಗಳೊಂದರಂತೊಂದಿಲ್ಲ |ಕರಧರ್ಮಕುಚಿತವಾ ಹೆಚ್ಚು ಕಡಮೆಗಳು ||ಪುರುಳ ಪಿಡಿವುವೆ ಬೆರಳ್ಗಳೆಲ್ಲಮೊಂದುದ್ದವಿರೆ? |ಸರಿಯಹುದು ಕಾರ್ಯದಲಿ - ಮಂಕುತಿಮ್ಮ ||
ಯುಕ್ತಿಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ |ಶಕ್ತಿ ಚತುರತೆಯುಡುಗಿ ನೀನು ಸೋತಂದು ||ಉತ್ಕ್ರಮಣದರೆಮನದಿ ದೈವವನು ಪಿಡಿದೇನು? |ಭಕ್ತಿ ರಕ್ತದಿ ಪರಿಗೆ - ಮಂಕುತಿಮ್ಮ ||
ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು |ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ||ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು? |ಕಿತ್ತ ಗಾಳಿಯ ಪಟವೊ - ಮಂಕುತಿಮ್ಮ ||