ಒಟ್ಟು 156 ಕಡೆಗಳಲ್ಲಿ , 1 ವಚನಕಾರರು , 135 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಿಲ್ಲಿ |ಎಲ್ಲಿ ಪರಿಪೂರಣವೊ ಅದನರಿಯುವನಕ ||ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? |ಎಲ್ಲ ಬಾಳು ರಹಸ್ಯ - ಮಂಕುತಿಮ್ಮ ||
ಎಲ್ಲರಿಗಮಾಗಿ ತಾನ್; ಎಲ್ಲರುಂ ತನಗಾಗಿ |ನಿಲ್ಲುವೇಕಾತ್ಮತೆಯ ಬಾಳ್ವೆಯಿಂ ಕಲಿಯಲ್ ||ಸಲ್ಲುವುಪಕರಣಗಳು ಮನೆ ರಾಜ್ಯ ಸಂಸಾರ- |ವಲ್ಲಗಳೆಯದಿರವನು - ಮಂಕುತಿಮ್ಮ ||
ಎಲ್ಲರಿಗಮೀಗ ನಮೊ---ಬಂಧುಗಳೆ; ಭಾಗಿಗಳೆ |ಉಲ್ಲಾಸವಿತ್ತವರೆ; ಮನವ ತೊಳೆದವರೆ ||ಟೊಳ್ಳು ಜಗ; ಸಾಕು ಬಾಳ್---ಎನಿಸಿ ಗುರುವಾದವರೆ |ಕೊಳ್ಳಿರೀ ನಮವನೆನು - ಮಂಕುತಿಮ್ಮ ||
ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು |ಏನನೋ ನೆನೆದು ಸರ್ರೆಂದು ಹಾರುವುದು ||ಬಾನೊಳಾಡುವ ಹಕ್ಕಿಗಿದುವೆ ನಿತ್ಯಾನುಭವ |ನೀನದನು ಮೀರಿಹೆಯ? - ಮಂಕುತಿಮ್ಮ ||
ಏಳಿಸುವುದೊಂದು ಹೊರಸುಳಿವೆನ್ನ ಹೃದಯದಲಿ |ಗಾಳಿಸುಂಟರೆಯನದು ಹರಣಗಳ ಕುಲುಕಿ ||ಬಾಳನಲ್ಲಾಡಿಪುದು ಬೇರಿಂದ ತುದಿವರೆಗೆ |ಧೂಳದರೊಳೀ ಜನ್ಮ - ಮಂಕುತಿಮ್ಮ ||
ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? |ಬಗೆದು ಬಿಡಿಸುವರಾರು ಸೋಜಿಗವನಿದನು? ||ಜಗವ ನಿರವಿಸಿದ ಕೈಯೊಂದಾದೊಡೇಕಿಂತು |ಬಗೆಬಗೆಯ ಜೀವಗತಿ? - ಮಂಕುತಿಮ್ಮ ||
ಒಂದು ಕಡೆ ಚಿಗುರುತಲಿ; ಒಂದು ಕಡೆ ಬಾಡುತಲಿ |ಕಂದುತಿರೆ ಕೊಂಬೆ; ಮುಂಡದಲಿ ಹಬ್ಬುತಲಿ ||ಎಂದೆಂದುಮಶ್ವತ್ಥ ಹಳೆಹೊಸದು; ತಾನದಾ |ಸ್ಪಂದನವೊ ಬ್ರಹ್ಮನದು - ಮಂಕುತಿಮ್ಮ ||
ಒಂದು ಕಣ್ಣಳುವಂದು ಮತ್ತೊಂದು ತಳ್ಕೈಸಿ |ಅಂದ ಚೆಂದಗಳ ಜನವರಸುವುದು ಬಾಳೊಳ್ ||ಬಂಧುಮೋಹವೊ ಯಶವೊ ವೈರವೊ ವೈಭವವೊ |ಬಂಧಿಪುದು ಜಗಕವರ - ಮಂಕುತಿಮ್ಮ ||
ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |ಸಂದಿಹುದು ಚಿರನವತೆಯಶ್ವತ್ಥಮರಕೆ ||ಎಂದೆಂದುಮಂತಿರುವುದೀ ವಿಶ್ವವೃಕ್ಷವದ |ರೊಂದು ರೆಂಬೆಯೊ ನೀನು - ಮಂಕುತಿಮ್ಮ ||
ಒಲ್ಲೆನೆನದಿರು ಬಾಳನ್; ಒಲವದೇನೆನ್ನದಿರು |ಉಲ್ಲಾಸಕೆಡೆಮಾಡು ನಿನ್ನಿನಾದನಿತು ||ನಿಲ್ಲು ಕೆಚ್ಚದೆಯಿಂದಲನ್ಯಾಯಗಳನಳಿಸೆ |ಎಲ್ಲಕಂ ಸಿದ್ಧನಿರು - ಮಂಕುತಿಮ್ಮ ||
ಔದಾರ್ಯ ತಾಯಿ ನೀತಿಗೆ; ಧೈರ್ಯವೇ ತಂದೆ |ಸ್ವಾಧಿಪತ್ಯದೆ ನೀನು ಬಾಳನಾಳುವೊಡೆ ||ಹೋದುದನು ನೆನೆಯದಿರು; ಬರುವುದಕೆ ಸಿದ್ಧನಿರು |ಆದನಿತು ಸಂತೋಷ - ಮಂಕುತಿಮ್ಮ ||
ಕಡಲ ಕಡೆದರು ಸುರಾಸುರರು ನಿಜಬಲದಿಂದ |ಕುಡಿದನದನು ತಪಸ್ಸಿನಿಂದ ಕುಂಭಜನು ||ಕಡಮೆಜನ ಪಾರಗಾಂಬರೆ ಗಾಸಿಯನು ಪಡದೆ? |ಪೊಡವಿ ಬಾಳ್ವೆಯುಮಂತು - ಮಂಕುತಿಮ್ಮ ||
ಕಡಿದೊಡೆ ಪರೀಕ್ಷೆಗುಳಿವುವು ಸತ್ತನಾರುಗಳು |ಕಡಿಯದಿರೆ ಮರದಿ ಪರಿಯುವುದು ಜೀವರಸ ||ಬಿಡುವಮ್ ಈ ಬಾಳ್ ಅದೇಕೆಂಬ ಚರ್ಚೆಯ; ನಾವು |ದುಡಿವಮ್ ಅದು ಪೆಂಪುಗೊಳೆ - ಮಂಕುತಿಮ್ಮ ||
ಕನಸು ದಿಟ; ನೆನಸು ದಿಟ; ತನುವೊಳಿಹ ಚೇತನವ |ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ||ಇನಿತನಿತು ದಿಟಗಳಿವು---ತುಂಬುದಿಟದಂಶಗಳು |ಗಣನೀಯವವು ಬಾಳ್ಗೆ - ಮಂಕುತಿಮ್ಮ ||
ಕಲೆಗಳಲಿ ಪರಮಕಲೆ ಜೀವನದ ಲಲಿತಕಲೆ |ಕಲಿಸಲದನಳವಲ್ಲ ಬಾಹ್ಯಬೋಧನೆಯಿಂ ||ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ |ತಿಳಿವುದೊಳಹದದಿಂದ - ಮಂಕುತಿಮ್ಮ ||