ಒಟ್ಟು 44 ಕಡೆಗಳಲ್ಲಿ , 1 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ |ಸನ್ನಾಹ ಸಾಗೀತೆ? ದೈವವೊಪ್ಪೀತೆ? ||ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ; ಭಿನ್ನಿಸಲಿ; |ನಿನ್ನ ಬಲವನು ಮೆರಸೊ - ಮಂಕುತಿಮ್ಮ ||
ಫಲವೇನು ಹೆಣಗಾಡಿ ಹೋರಾಡಿ ಧರೆಯೊಳಗೆ? |ಸಲಿಸದೊಂದನುಮೊಂದನುಂ ದೈವ ಬಿಡದು ||ಹೊಲಸೆಲ್ಲವೆಲ್ಲಪಾಳ್; ಬಾಳ್ಗೆ ತಳಹದಿಯಿಲ್ಲ |ಗಲಿಬಿಲಿಯಿದೆನಬೇಡ - ಮಂಕುತಿಮ್ಮ ||
ಬನ್ನಿರಾಡುವ ಕಣ್ಣಮುಚ್ಚಾಲೆಯಾಟವನು |ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ ||ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು |ಎನ್ನುವಜ್ಜಿಯೊ ಬೊಮ್ಮ - ಮಂಕುತಿಮ್ಮ ||
ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ |ಮಹಿಮೆಯಲ್ಲೇನೆಂದು ಸಂಶಯಿಸಬೇಡ ||ವಿಹಿತಗೈದವರಾರು ವಸತಿಯಂ ದೈವಕ್ಕೆ? |ಮಹಿಮೆ ಮನಸೋತೆಡೆಯೊ - ಮಂಕುತಿಮ್ಮ ||
ಬಾಳ ಹಳಿವುದದೇಕೆ? ಗೋಳ ಕರೆವುದದೇಕೆ? |ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ||ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ |ಪಾಲುಗೊಳಲಳಬೇಡ - ಮಂಕುತಿಮ್ಮ ||
ಬಿಟ್ಟೆನೆಲ್ಲವನೆಂಬ ಹೃದಯಶೋಷಣೆ ಬೇಡ |ಕಟ್ಟಿಕೊಳ್ಳುವ ಶಿರಃಪೀಡೆಯುಂ ಬೇಡ ||ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು |ಮುಟ್ಟದಿಳೆಯಸಿ ನಿನ್ನ - ಮಂಕುತಿಮ್ಮ ||
ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ |ಬೇಡಲೊಳಿತಾವುದೆಂಬುದರರಿವುಮಿಲ್ಲ ||ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ |ನೀಡುಗೆದೆಗಟ್ಟಿಯನು - ಮಂಕುತಿಮ್ಮ ||
ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತಗೊಳಬೇಡ |ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ||ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? |ದಿಕ್ಕವರಿಗವರವರೆ - ಮಂಕುತಿಮ್ಮ ||
ಮರವ ನೀನರಿಯುವೊಡೆ ಬುಡವ ಕೀಳಲುಬೇಡ |ತರಿಯಬೇಡೆಲೆಕಡ್ಡಿಗಳ ಪರೀಕ್ಷಣಕೆ ||ಎರೆ ನೀರ; ಸುರಿ ಗೊಬ್ಬರವ; ಕೆದಕು ಪಾತಿಯನು |ನಿರುಕಿಸುತ ತಳಿರಲರ - ಮಂಕುತಿಮ್ಮ ||
ಲೀಲೆಯೇಂ ಬಾಳೆಲ್ಲ? ಛೀ ತಳ್ಳು ಹಾಸ್ಯವನು |ಬಾಲರೇಂ ನಾವಿನ್ನುಮೆನುತ ಪಲ್ಕಡಿದು ||ಖೇಲನವ ಬೇಡವೆನುವರನು ವಿಧಿರಾಯನವ--- |ಹೇಳಿಪನು ಸೆರೆವಿಡಿದು - ಮಂಕುತಿಮ್ಮ ||
ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ |ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ |ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು |ಶ್ರೇಯಸ್ಸು ಧೀಮಹಿಮೆ - ಮಂಕುತಿಮ್ಮ ||
ಸತ್ತವೆನ್ನಾಶೆಗಳು; ಗೆದ್ದೆನಿಂದ್ರಿಯಗಣವ |ಚಿತ್ತವಿನ್ನಲುಗದೆಂಬಾ ಜಂಬ ಬೇಡ ||ಎತ್ತಣಿಂದಲೊ ಗಾಳಿ ಮೋಹಬೀಜವ ತಂದು |ಬಿತ್ತಲಾರದೆ ಮನದಿ? - ಮಂಕುತಿಮ್ಮ ||
ಸತ್ತೆನೆಂದೆನಬೇಡ; ಸೋತೆನೆಂದೆನಬೇಡ |ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ||ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು |ಮತ್ತೆ ತೋರ್ಪುದು ನಾಳೆ - ಮಂಕುತಿಮ್ಮ ||
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ |ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ||ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು? |ಒರಟು ಕೆಲಸವೊ ಬದುಕು - ಮಂಕುತಿಮ್ಮ ||
ಸುರಪಸಭೆಯಲಿ ಗಾಧಿಸುತ ವಸಿಷ್ಠ ಸ್ಪರ್ಧೆ |ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ||ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ |ಕರುಮಗತಿ ಕೃತ್ರಿಮವೊ - ಮಂಕುತಿಮ್ಮ ||