ಒಟ್ಟು 41 ಕಡೆಗಳಲ್ಲಿ , 1 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ದೊರೆವ ಜೀತಕೆ ದುಡಿತ; ಮರುದಿನದ ಚಿಂತೆ ಮಿತ |ಹೊರೆಯ ಹಗುರಾಗಿಸುವ ಕೆಳೆಯರೊಡನಾಟ ||ಸರಳತೆಯ ಪರಿತುಷ್ಟಿ; ಪರಮಾರ್ಥ ದೃಷ್ಟಿಯಿವು |ಸರಿಗೂಡೆ ಸುಕೃತವದು - ಮಂಕುತಿಮ್ಮ ||
ದ್ವೈತವೇನದ್ವೈತವೇನಾತ್ಮದರ್ಶನಿಗೆ? |ಶ್ರೌತಾದಿವಿಧಿಯೇನು? ತಪನಿಯಮವೇನು? ||ನೀತಿ ಸರ್ವಾತ್ಮಮತಿಯದರಿನಮಿತಪ್ರೀತಿ |ಭೀತಿಯಿಲ್ಲದನವನು - ಮಂಕುತಿಮ್ಮ ||
ಪದರಪದರಗಳಿಹುವು ಗಂಟುಗಂಟುಗಳಿಹುವು |ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ ||ಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ? |ವಿಧಿಯ ಕೈಚಿತ್ರವದು - ಮಂಕುತಿಮ್ಮ ||
ಪರಿಮಿತಿಯನರಿತಾಶೆ; ಪರವಶತೆಯಳಿದ ಸುಖ |ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ ||ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ |ವರಗಳೀ ನಾಲ್ಕೆ ವರ - ಮಂಕುತಿಮ್ಮ ||
ಪುರುಷಂ ಸ್ವತಂತ್ರನೋ? ದೈವವಿಧಿ ಪರವಶನೊ? |ಎರಡುಮನಿತಿನಿತುಳ್ಳ ತೋಳಿನಂತಿಹನೋ? ||ತಿರುಗುವುದು ಮಡಿಸುವುದು ತೋಳ್ ಮೈಯಕಟ್ಟಿನಲಿ |ನರನಂತು ಮಿತಶಕ್ತ - ಮಂಕುತಿಮ್ಮ ||
ಬಂಧುವುಂ ಮಿತ್ರನುಂ ಭೃತ್ಯನುಂ ಶತ್ರುವೊಲೆ |ದಂಡಧರನೋಲಗಕೆ ನಿನ್ನನೆಳೆವವರೋ ||ಅಂದದೊಡವೆಯ ಮೊನೆಗಳಿಂದೆದೆಯನೊತ್ತುವಾ |ಮಂದಹಸಿತದ ಕೊಲೆಯೊ - ಮಂಕುತಿಮ್ಮ ||
ಬಿಂದು ವಿಸರಗಳನುವು; ವಂಕು ಸರಲಗಳನುವು |ಚೆಂದ ಕಣ್ಣಿಗೆ ವರ್ಣವಿವಿಧಂಗಳನುವು ||ಚೆಂದ ವೇಗ ಸ್ತಿಮಿತದನುವು; ಹುಳಿಯುಪ್ಪನುವು |ದ್ವಂದ್ವದನುವುಗಳಂದ - ಮಂಕುತಿಮ್ಮ ||
ಮತಿ ನಯನದಂತೆ ಮುಂದಿರ್ಪುದನು ನೋಡುವುದು |ಮಿತವದರ ಕೆಲಸ; ಹೆಳವನ ಚಲನೆಯಂತೆ ||ಗತಿಶಕ್ತಿಯದಕೆ ಮನವೆಂಬ ಚರಣದ ಬಲದೆ |ಮತಿಬಿಟ್ಟ ಮನ ಕುರುಡು - ಮಂಕುತಿಮ್ಮ ||
ಮತಿವಂತರಿದ್ದರಲ ನಮ್ಮ ಹಿಂದೆಯುಮಿಲ್ಲಿ |ಹಿತಚಿಂತಕರು ಜನಕೆ; ಕೃತಪರಿಶ್ರಮರು? ||ಅತಿವೈದ್ಯದಿಂದ ಹೊಸರುಜಿನಕೆಡೆಯಾದೀತೊ |ಮಿತಿಯಿಂ ನವೀಕರಣ - ಮಂಕುತಿಮ್ಮ ||
ಮನುಜಸಾಕಲ್ಯದನುಭವಕೆ ಮಿತಿಗೊತ್ತುಂಟೆ? |ದಿನದಿನವು ಕಡಲಲೆಗಳಂತೆ ಪರಿವುದದು ||ಅನುಮಿತಿಯ ನಿರ್ಧಾರವದರಿಂ ನಿರಾಧಾರ |ದನಿ ನೂರು ನರನೆದೆಗೆ - ಮಂಕುತಿಮ್ಮ ||
ಮಿತ ನಿನ್ನ ಗುಣ ಶಕ್ತಿ; ಮಿತ ನಿನ್ನ ಕರ್ತವ್ಯ |ಮಿತ ಅತಿಗಳಂತರವ ಕಾಣುವುದೆ ಕಡಿದು ||ಹಿತವೆನಿಸಿದನಿತೆಸಗು; ದೈವಕುಳಿದುದನು ಬಿಡು |ಕೃತಿಯಿರಲಿ ದೈವಕಂ - ಮಂಕುತಿಮ್ಮ ||
ಮಿತಿಯನರಿತಾಶೆ; ಸಮುಚಿತವ ಮರೆಯದ ಯತ್ನ |ತೈತಿಕ್ಷೆ ಕಷ್ಟಾಂಶದಪರಿಹಾರ್ಯತೆಗೆ ||ಮೃತಿಯೆ ಜೀವನಕಥೆಯ ಕೊನೆಯಲ್ಲವೆಂಬರಿವು |ಹಿತಗಳಿವು ನರಕುಲಕೆ - ಮಂಕುತಿಮ್ಮ ||
ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ |ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? |ಸತ್ರ ಹೊಸದಿಹುದು ನಡೆ - ಮಂಕುತಿಮ್ಮ ||
ವ್ಯಕ್ತಿಮಾತ್ರದ ವಿಭವ ವಿಶ್ವಾತ್ಮತಾನುಭವ |ಮುಕ್ತಿ ಸುಖವಾಂತರಿಕವದು ನಿರವಧಿಸುಖ ||ಭಾಕ್ತ ಪ್ರಪಂಚಸುಖವೆಂತಪರಿಮಿತವಹುದು? |ರಿಕ್ತಸುಖ ಬಾಹ್ಯಸುಖ - ಮಂಕುತಿಮ್ಮ ||
ಸ್ಮಿತವಿರಲಿ ವದನದಲಿ; ಕಿವಿಗೆ ಕೇಳಿಸದಿರಲಿ |ಹಿತವಿರಲಿ ವಚನದಲಿ; ಋತವ ಬಿಡದಿರಲಿ ||ಮಿತವಿರಲಿ ಮನಸಿನುದ್ವೇಗದಲಿ; ಭೋಗದಲಿ |ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ||