ಒಟ್ಟು 946 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಜಾನಪದ ಶಿಷ್ಟಿಯಲಿ; ಸಂಪತ್ಸಮಷ್ಟಿಯಲಿ |ಜ್ಞಾನಸಂಧಾನದಲಿ; ಮೌಲ್ಯ ಗಣನೆಯಲಿ ||ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |ಆನಂದ ಧರೆಗಂದು - ಮಂಕುತಿಮ್ಮ ||
ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು |ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು ||ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ |ಮಾನವತೆ ನಿಂತಿಹುದು - ಮಂಕುತಿಮ್ಮ ||
ಜೀವ ಜಡರೂಪ ಪ್ರಪಂಚವನದಾವುದೋ |ಆವರಿಸಿಕೊಂಡುಮೊಳನೆರೆದುಮಿಹುದಂತೆ||ಭಾವಕೊಳಪಡದಂತೆ ಅಳತೆಗಳವಡದಂತೆ |ಆ ವಿಶೇಷಕೆ ಮಣಿಯೊ - ಮಂಕುತಿಮ್ಮ ||
ಜೀವಋಣಗಳ ಲೆಕ್ಕದಾದಿಯರಿಯದ ನಾವು |ಆವುದನು ಸರಿಯೆನುವ? ತಪ್ಪಾವುದೆನುವ? ||ಓವೊ ಬಿಡು ಕಡುಕಷ್ಟ ನೀತಿನಿರ್ಣಯದ ಹೊರೆ |ದೈವವದ ಹೊರಲಿ ಬಿಡು - ಮಂಕುತಿಮ್ಮ ||
ಜೀವಕಾರಣಮೂಲ ಗೂಢವಾಗಿರ್ದೊಡಂ |ಧೀವಿಕಾಸದ ಬೆಳಕನಾದನಿತು ಗಳಿಸಿ ||ಕೈವಲ್ಯಪಥವನರಸುತ ಯಾತ್ರಿಸಲೆಬೇಕು |ದೀವಿಗೆಯು ಮತಿಯೊಂದೆ - ಮಂಕುತಿಮ್ಮ ||
ಜೀವಗತಿಗೊಂದು ರೇಖಾಲೇಖವಿರಬೇಕು |ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? |ಆವುದೀ ಜಗಕಾದಿ? - ಮಂಕುತಿಮ್ಮ ||
ಜೀವದುದಯ ರಹಸ್ಯ; ಜೀವವಿಲಯ ರಹಸ್ಯ |ಜೀವನದ ದೃಶ್ಯ ಮರುವಿನ ಬಿಸಿಲ್ಗುದುರೆ ||ಭಾವಿಸಲಿದೇ ತತ್ತ್ವ : ಬ್ರಹ್ಮಮಾಯೆಯೆ ವಿಶ್ವ |ಕೇವಲಾತ್ಮ ಬ್ರಹ್ಮ - ಮಂಕುತಿಮ್ಮ ||
ಜೀವನದ ಪರಿಪೂರ್ಣದರ್ಶನವದೊಂದಿಹುದು |ಭೂವ್ಯೋಮ ವಿಸ್ತರದ ಮಿತಿಯ ಮೀರ್ದುದದು ||ದೇವ ನರ ಪಶು ಸಸಿಗಳೆಲ್ಲ ಕುಣಿಯುವರಲ್ಲಿ |ಭಾವಿಸಾ ಚಿತ್ರವನು - ಮಂಕುತಿಮ್ಮ ||
ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ |ತೀವಿರ್ಪುದದು ಕೆಳಗೆ ನಮ್ಮ ಲೋಕದಲಿ ||ನಾವದರ ಕಡ್ಡಿಯೆಲೆ; ಚಿಗುರುವೆವು; ಬಾಡುವೆವು |ಸಾವು ಮರಕೇನಿಲ್ಲ - ಮಂಕುತಿಮ್ಮ ||
ಜೀವನದೊಂದು ಪರಮೈಶ್ವರ್ಯ ಬೊಮ್ಮನದು |ಸೇವೆಯದನೂರ್ಜಿತಂಗೊಳಿಸುವೆಲ್ಲೆಸಕ ||ಈವರಾರ್ ಕೊಳುವರಾರೆಲ್ಲರೊಂದಾಗಿರಲು? |ನೈವೇದ್ಯಭಾಗಿ ನೀಂ - ಮಂಕುತಿಮ್ಮ ||
ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? |ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ||ಆವುದೋ ಕುಶಲತೆಯದೊಂದಿರದೆ ಜಯವಿರದು |ಆ ವಿವರ ನಿನ್ನೊಳಗೆ - ಮಂಕುತಿಮ್ಮ ||
ಜೀವನವ್ಯಾಪಾರ ಮೂವರೊಟ್ಟುವಿಚಾರ |ಭಾವಿಪೊಡೆ ನೀನು; ಜಗ; ಇನ್ನೊಂದದೃಷ್ಟ ||ಆವಗಂ ಮೂರನೆಯ ಭಾಗಸ್ಥನಿಚ್ಛೆ ಬಲ |ಈ ವಿವರವರಿಯೆ ಸುಖ - ಮಂಕುತಿಮ್ಮ ||
ಜೀವನೋದ್ಯಮವೆಲ್ಲ ತೋಟದುದ್ಯೋಗವೆನು |ಭಾವಬುದ್ಧಿಗಳ ಕೃಷಿಯಿಂದೊಗೆದ ಫಲದಿಂ ||ತೀವುತಿರೆ ನಗೆ ಹೊಳಪು ಮೊಗಮೊಗದೊಳಂ ಜಗದಿ |ಸೇವೆಯದು ಬೊಮ್ಮಂಗೆ - ಮಂಕುತಿಮ್ಮ ||
ಜೀವಸತ್ತ್ವದಪಾರಭಂಡಾರವೊಂದಿಹುದು |ಸಾವಕಾರನದೃಷ್ಟನ್ ಅದನಾಳುತಿಹನು ||ಆವಶ್ಯಕದ ಕಡವನವನೀವುದುಂಟಂತೆ! |ನಾವೊಲಿಪುದೆಂತವನ? - ಮಂಕುತಿಮ್ಮ ||
ಜೀವಿ ಬೇಡದಿರೆ ದೈವವನು ಕೇಳುವರಾರು? |ದೈವ ಗುಟ್ಟಿರಿಸದಿರೆ ಜೀವಿಯರಸುವುದೇಂ? ||ಜೀವ ದೈವಂಗಳ ಪರಸ್ಪರಾನ್ವೇಷಣೆಯೆ |ಲಾವಣ್ಯ ಸೃಷ್ಟಿಯಲಿ - ಮಂಕುತಿಮ್ಮ ||