ಒಟ್ಟು 4119 ಕಡೆಗಳಲ್ಲಿ , 1 ವಚನಕಾರರು , 937 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ |ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ||ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ |ಲೋಲನಾಗಿರ್ಪನೆಲೊ - ಮಂಕುತಿಮ್ಮ ||
ಟಗರೆರಡ ಬೆಳಸಿ ಕೊಬ್ಬಿಸಿ ಕೆಣಕಿ ಹುರಿಗೊಳಿಸಿ |ಜಗಳವಾಡಿಸಿ ದೈವಜೀವಗಳ ಪೆಸರಿಂ ||ನಗುತಲಿರುವನು ನೋಡಿ; ಪರಬೊಮ್ಮನೇಂ ಬಿನದಿ! |ಬಿಗಿಯದಿರು ನೀಂ ಬೀಗಿ - ಮಂಕುತಿಮ್ಮ ||
ತಕ್ಕಡಿಯ ದೈವ ಪಿಡಿದದರೊಂದು ತಟ್ಟೆಯಲಿ |ಒಕ್ಕುವುದು ಬಿಡದೆ ಜೀವಿಯ ಪಾಪಚಯವ ||ಇಕ್ಕುವುದು ಸುಕೃತಗಳನಿನ್ನೊಂದರೊಳಗಲ್ಲಿ |ಭಕ್ತಿ ಪಶ್ಚಾತ್ತಾಪ - ಮಂಕುತಿಮ್ಮ ||
ತಂಗಳುಣಿಸಾದೊಡಂ ಸಾಕೆನುವನುಪವಾಸಿ |ಸಿಂಗಾರ ಸಂಗಾತಿ ಬೇಕುಂಡವನಿಗೆ ||ಬಂಗಾರ ಪದವಿ ಪ್ರತಿಷ್ಠೆ ಬೇಕಾ ಬಳಿಕ |ಹಿಂಗದಾಯೆದೆಚಿಲುಮೆ - ಮಂಕುತಿಮ್ಮ ||
ತಡಕಾಟ ಬದುಕೆಲ್ಲವೇಕಾಕಿಜೀವ ತ |ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ ||ಪಿಡಿಯಲಲೆದಾಡುಗುಂ; ಪ್ರೀತಿ ಋಣ ಮಮತೆಗಳ |ಮಡುವೊಳೋಲಾಡುತ್ತೆ - ಮಂಕುತಿಮ್ಮ ||
ತತ್ತ್ವಸಾಕ್ಷಾತ್ಕಾರ ಚಿತ್ತಶುದ್ಧಿಯಿನಹುದು |ಚಿತ್ತಶೋಧನೆ ಮತಿಚಮತ್ಕಾರವಲ್ಲ ||ಬಿತ್ತರದ ಲೋಕಪರಿಪಾಕದಿಂ; ಸತ್ಕರ್ಮ |ಸಕ್ತಿಯಿಂ ಶುದ್ಧತೆಯೊ - ಮಂಕುತಿಮ್ಮ ||
ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾ? |ಹೊಂದಿರುವರವರ್ ಅಹಂತೆಯು ಮೊಳೆಯುವನಕ ||ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ? |ಬಂಧ ಮುರಿವುದು ಬಳಿಕ - ಮಂಕುತಿಮ್ಮ ||
ತನಗಿಂತ ಹಿರಿದ; ಭುವನಕ್ಕಿಂತ ಹಿರಿದೊಂದ- |ನನುಭವದ ಹಿಂದೆ; ಸೃಷ್ಟಿಯ ನೆರಳ ಹಿಂದೆ ||ಅನುಮಿತಿಸಿ ಮನುಜನಾ ಹಿರಿದನೆಳಸುವನೆಯ್ದೆ |ಮನುಜನೊಳಹಿರಿಮೆಯದು - ಮಂಕುತಿಮ್ಮ ||
ತನಗೆ ಬಾರದ ಲಾಭ ತನಯಂಗೆ ಬಂದಾಗ |ಜನಕನ್ ಅದು ತನದೆಂದು ಸಂತಸಿಪ ತೆರದಿ ||ಜನದೊಳಾರ್ಗಾವ ಸೊಗವಾದೊಡಂ ತನದೆನ್ನು- |ತನುಭವಿಪನೋ ಜ್ಞಾನಿ - ಮಂಕುತಿಮ್ಮ ||
ತನುಭವವ್ಯಾಮೋಹ ಮುಸುಕಿತಾ ವ್ಯಾಸನಂ |ಜನಿಪುದದು ಪ್ರಕೃತಿತಂತ್ರದೆ ಹೃದಯತಲದೊಳ್ ||ಕ್ಷಣಮಾತ್ರ ಮಾನುಮದು ಕಣ್ಣೀರ ಬರಿಸುವುದು |ಗಣಿಸಬೇಡದನು ನೀಂ - ಮಂಕುತಿಮ್ಮ ||
ತನುರುಜೆಗೆ ಪಥ್ಯಾನ್ನ; ಬಾಯ ಚಪಲಕ್ಕಲ್ಲ |ಮನದ ಶಿಕ್ಷೆಗೆ ಲೋಕ; ಮಮಕಾರಕಲ್ಲ ||ಗುಣಚರ್ಯೆ ವಿಶ್ವಸಮರಸಕೆ; ಕಾಮಿತಕಲ್ಲ |ಮುನಿವೃತ್ತಿ ಸೂತ್ರವಿದು - ಮಂಕುತಿಮ್ಮ ||
ತನುವ ತಣಿಸುವ ತುತ್ತು ಮನಕೆ ನಂಜಾದೀತು |ಮನಮೋಹ ಜೀವಕ್ಕೆ ಗಾಳವಾದೀತು ||ಅನುಭವದ ಪರಿಣಾಮವೊಂದರಿಂದೊಂದಕ್ಕೆ |ಗಣಿಸಾತ್ಮಲಾಭವನು - ಮಂಕುತಿಮ್ಮ ||
ತನುವೇನು? ಮನವೇನು? ಪರಮಾಣು ಸಂಧಾನ |ಕುಣಿಸುತಿಹುದುಭಯವನು ಮೂರನೆಯದೊಂದು ||ತೃಣದ ಹಸಿರಿನ ಹುಟ್ಟು ತಾರೆಯೆಸಕದ ಗುಟ್ಟು |ದಣಿಯದದನರಸು ನೀಂ - ಮಂಕುತಿಮ್ಮ ||
ತನ್ನ ಬೆವರಿನ ಕೊಳದಿ ತಾಂ ಮುಳುಗಿ ತೇಲುತ್ತೆ |ಧನ್ಯನಾನೆನ್ನುವನದೊರ್ವ ಸ್ವತಂತ್ರನ್ ||ಪುಣ್ಯತೀರ್ಥದೊಳಿಳಿದು ಕರಗಲ್ ಸ್ವತಂತ್ರ ತಾನ್ |ಎನ್ನುವವನಿನ್ನೊರ್ವ - ಮಂಕುತಿಮ್ಮ ||
ತನ್ನ ಮನದಾಟಗಳ ತಾನೆ ನೋಡುತ ನಗುವ |ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |ಧನ್ಯತೆಯ ಕಂಡವನು - ಮಂಕುತಿಮ್ಮ ||