ಒಟ್ಟು 946 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ |ತೊಟ್ಟಿಲಿಗೆ ಹಬ್ಬ ಮಸಣವು ತೇಗುತಿರಲು ||ಹುಟ್ಟಿದವರೆಲ್ಲ ಸಾಯದೆ ನಿಲ್ಲೆ; ಹೊಸತಾಗಿ |ಹುಟ್ಟುವರ್ಗೆಡೆಯೆಲ್ಲಿ? - ಮಂಕುತಿಮ್ಮ ||
ತೊರೆಯ ತೆರೆಸಾಲ್ಗಳೇಳುತ ಬೀಳುತಿರುವಂತೆ |ಪರಿಯುತಿರ್ಪುದು ಪುರುಷಚೈತನ್ಯಲಹರಿ ||ಅರಿಯದದು ನಿಲುಗಡೆಯ; ತೊರೆಯದದು ಚಲಗತಿಯ |ಪರಬೊಮ್ಮನುಯ್ಯಲದು - ಮಂಕುತಿಮ್ಮ ||
ತೊಲಗು ನಿರ್ಜನದೆಡೆಗೆ; ತೊಲಗು ಮಸಣದ ಕಡೆಗೆ |ಒಲವ ಬೇಡಿಸದೆಡೆಗೆ; ಅಳುವು ಬರದೆಡೆಗೆ ||ವಿಲಯವಾಗಿಸಿ ಮನವನ್; ಅಲುಗಾಡಿಸದೆ ತುಟಿಯ |ತೊಲಗಿ ಮಲಗಲ್ಲಿ ನೀಂ - ಮಂಕುತಿಮ್ಮ ||
ತೊಲಗೆಲವೊ ಮನೆಯಿಂದ ಮನವು ಬರಡಾದಂದೆ |ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ||ತೊಲಗು ಜಗದಿಂ ದೂರ; ಇಳೆಗಾಗದಿರು ಭಾರ |ತೊಲಗಿ ನೀಂ ಮರೆಯಾಗು - ಮಂಕುತಿಮ್ಮ ||
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ |ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ||ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ |ಬಾಯ ಚಪ್ಪರಿಸುವನು - ಮಂಕುತಿಮ್ಮ ||
ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ |ನಿಜಕುಕ್ಷಿಚಿಂತೆಯೇಂ ಮೊದಲು ಮನೆತಾಯ್ಗೆ? ||ಭುಜಿಪ ಪತಿಸುತರೊಪ್ಪು ತುಪ್ಪವವಳೂಟಕ್ಕೆ |ಭಜಿಸು ನೀನಾ ವ್ರತವ - ಮಂಕುತಿಮ್ಮ ||
ತ್ರಾಸಿನಲಿ ಕಪ್ಪೆಗಳ ಸರಿಕೂಡಿಸುವ ಚತುರಿ |ಸಂಸೃತಿ ದ್ವಂದ್ವಗಳ ಸಮತೂಗಲರಿವಂ ||ಬೀಸುಕತ್ತಿಗಳ ಮಧ್ಯದಿ ನೂಲಮೇಲ್ ನಡೆವ |ಸಾಸವೀ ಗೃಹಧರ್ಮ - ಮಂಕುತಿಮ್ಮ ||
ದಂಡನಿರ್ಣಯದಿ ನೀಂ ಕ್ಷಮಿಸೆನಲ್ ನ್ಯಾಯಪತಿ |ಹಿಂದಿನಾ ನಿನ್ನೊಳ್ತನವನ್ ಅಂದಿನಳಲನ್ ||ತಂದೆಬಗೆಯಿಂ ಬಗೆದು ಶಾಸನೋಗ್ರವನಿನಿತು |ಕುಂದಿಸಲಿಕಾಗದೇಂ? - ಮಂಕುತಿಮ್ಮ ||
ದನ ಸಿಂಗ ಹುಲಿ ಹಕ್ಕಿ ಹಾವು ಮೀನ್ಗಳಿಗೆಲ್ಲ |ಇನಿಸುಣಿಸು; ಬೆದೆ; ಬೆದರು---ಅಷ್ಟೆ ಜೀವಿತವು ||ಮನುಜನೆಂತನಿತರಿಂ ತೃಪ್ತಿವಡೆವನವಂಗೆ |ಕ್ಷಣಕ್ಷಣವು ಹೊಸ ಹಸಿವು - ಮಂಕುತಿಮ್ಮ ||
ದರಿಯಿರದೆ ಗಿರಿಯಿಲ್ಲ; ನೆರಳಿರದೆ ಬೆಳಕಿಲ್ಲ |ಮರಣವಿಲ್ಲದೆ ಜನನಜೀವನಗಳಿಲ್ಲ ||ವರಗುಣೋನ್ನತಿಗೆ ನಿಮ್ನಗುಣಂಗಳೊಡವುಟ್ಟು |ತೆರೆ ಬೀಳದೇಳುವುದೇ - ಮಂಕುತಿಮ್ಮ ||
ದಾರಿಗುರಿಗಳ ಗೊತ್ತು ಕಗೆಗುಂಟೇನಯ್ಯಾ? |ಆರ ಮನೆ ಸಂಡಿಗೆಯೊ; ಚುಂಡಿಲಿಯೊ; ಹುಳುವೋ ||ಆರ ಪಿಂಡವೊ; ಏನೊ; ಎಂತೊ; ಆ ಬಾಳ ಗತಿ! |ಮೀರಿದವನೇಂ ನೀನು? - ಮಂಕುತಿಮ್ಮ ||
ದಾಸರೋ ನಾವೆಲ್ಲ ಶುನಕನಂದದಿ ಜಗದ |ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ||ಪಾಶಗಳು ಹೊರಗೆ; ಕೊಂಡಿಗಳು ನಮ್ಮೊಳಗಿಹುವು |ವಾಸನಾಕ್ಷಯ ಮೋಕ್ಷ - ಮಂಕುತಿಮ್ಮ ||
ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ |ಜನರೆಲ್ಲರಾಗುಡಿಯ ಕೆಲಸದಾಳುಗಳು ||ಮನೆಯೇನು? ನಾಡೇನು? ಕುಲವೇನು? ಮಠವೇನು? |ಎಣಿಸೆಲ್ಲವದೆಯೆಂದು - ಮಂಕುತಿಮ್ಮ ||
ದಿನದಿನವು ಹಳಸುವುವು; ದಿನದಿನವು ಕೊಳೆಯುವುವು |ಮನುಜಕುಲದೆಲ್ಲ ಕೃತಿವಿಜಯವಿಭವಗಳು ||ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |ಜನುಮಸಫಲತೆ ನಿನಗೆ - ಮಂಕುತಿಮ್ಮ ||
ದಿವಸಕೊಳಗದಿನ್ ಆಯುರಾಶಿಯನು ರವಿಯಳೆಯಲ್ |ಅವನ ಮಗ ಜವನ್ ಅದರ ಲೆಕ್ಕವಿರಿಸುವನು ||ದಿವಿಜರೊಳಗಿವರಿರ್ವರುಪಕಾರಿಗಳು ನಮಗೆ |ಸವೆಸುವರು ತನುಘಟವ - ಮಂಕುತಿಮ್ಮ ||