ಒಟ್ಟು 39 ಕಡೆಗಳಲ್ಲಿ , 1 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ |ಜಗಕೆ ಕಾಣಿಪುದೊಂದು; ಮನೆಯ ಜನಕೊಂದು ||ಸೊಗಸಿನೆಳಸಿಕೆಗೊಂದು; ತನ್ನಾತ್ಮಕಿನ್ನೊಂದು |ಬಗೆಯೆಷ್ಟೊ ಮೊಗವಷ್ಟು - ಮಂಕುತಿಮ್ಮ ||
ಶೀತಾಳೆ ಸಿಡುಬು ಶಿಶುಗಳ ಕುಲುಕಿ ತೆರಳುವುದು |ಪ್ರೀತಿ ಕಾಮನೆಗಳಷ್ಟಿಷ್ಟು ಬೆಳೆದವರ ||ಯಾತನೆಗಳಿಂ ಕುದಿಸಿ ಕುಲುಕಿ ಬಳಿಕಾರುವುವು |ಕಾತರತೆ ಕಳೆಯೆ ಸುಖ - ಮಂಕುತಿಮ್ಮ ||
ಶ್ರೀವಿಷ್ಣು ವಿಶ್ವಾದಿಮೂಲ ಮಾಯಾಲೋಲ |ದೇವ ಸರ್ವೇಶ ಪರಬೊಮ್ಮನೆಂದು ಜನಂ ||ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ |ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ ||
ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ |ಬಚ್ಚಿಡುವುದದನು ಜೀವಿತೆಯ ಮಾಯಿಕತೆ ||ಇಕ್ಷುವೊಲ್ ಜೀವ; ಗಾಣದವೊಲ್ ಜಗನ್ಮಾಯೆ |ನಿಚ್ಚವಿಳೆಯಾಲೆಮನೆ - ಮಂಕುತಿಮ್ಮ ||
ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |ಹೊಮ್ಮುವೆನು ಕೋಟಿರೂಪದಲಿ ನಾನೆಂದು ||ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ |ನಮ್ಮಿರವು ಮಾಯೆಯಲಿ - ಮಂಕುತಿಮ್ಮ ||
ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ |ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ |ತಳಮಳಿಸುತಿದೆ ಲೋಕ - ಮಂಕುತಿಮ್ಮ ||
ಹುಲ್ಲಾಗು ಬೆಟ್ಟದಡಿ; ಮನೆಗೆ ಮಲ್ಲಿಗೆಯಾಗು |ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ||ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ |ಎಲ್ಲರೊಳಗೊಂದಾಗು - ಮಂಕುತಿಮ್ಮ ||