ಒಟ್ಟು 170 ಕಡೆಗಳಲ್ಲಿ , 1 ವಚನಕಾರರು , 151 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು |ಬಂದುದೀ ವೈಷಮ್ಯ? - ಮಂಕುತಿಮ್ಮ ||
ಒಲ್ಲೆನೆನದಿರು ಬಾಳನ್; ಒಲವದೇನೆನ್ನದಿರು |ಉಲ್ಲಾಸಕೆಡೆಮಾಡು ನಿನ್ನಿನಾದನಿತು ||ನಿಲ್ಲು ಕೆಚ್ಚದೆಯಿಂದಲನ್ಯಾಯಗಳನಳಿಸೆ |ಎಲ್ಲಕಂ ಸಿದ್ಧನಿರು - ಮಂಕುತಿಮ್ಮ ||
ಕಡೆಗಾಲವನು ತಾನೆ ಮುನ್ನರಿತು ಕಾಡಾನೆ- |ಯಡವಿಯೊಳದೊಂದು ದೂರದ ಗವಿಯನೈದಿ ||ಬಿಡುವುದಾಯೆಡೆ ಮೌನದಿಂದಸುವನೆನ್ನುವರು |ಕಡೆಯ ಸಾರಂತು ನೀಂ - ಮಂಕುತಿಮ್ಮ ||
ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ |ಸುಮವಪ್ಪುದಂತೆ ಮರುವಗಲು ಮಗುಳ್ದಂತು ||ಅಮಿತ ಪ್ರಪಂಚನಾಕುಂಚನಾವರ್ತನ |ಕ್ರಮವೆ ವಿಶ್ವಚರಿತ್ರೆ - ಮಂಕುತಿಮ್ಮ ||
ಕಲ್ಲಾಗಿ ನಿಲ್ಲುವನು; ಬಳ್ಳಿವೊಲು ಬಳುಕುವನು |ಮುಳ್ಳಾಗಿ ಚುಚ್ಚುವನು; ಫುಲ್ಲ ಸುಮವಹನು ||ಕಲ್ಲೋಲವಾರಿಧಿವೊಲುರವಣಿಸಿ ಮೊರೆಯುವನು |ಕ್ಷುಲ್ಲಮಾನಿಸನಿವನು - ಮಂಕುತಿಮ್ಮ ||
ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ |ಯಕ್ಷಿಯರು ಮ್ಯಾಕ್ಬೆತನಿಗೆಸಗಿದುಪದೇಶ |ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು? |ಅಕ್ಷಿ ನಿರ್ಮಲವೇನೊ? - ಮಂಕುತಿಮ್ಮ ||
ಕಾಡುಹಕ್ಕಿ ಹುಳಕ್ಕೆ ವರ್ಣಚಿತ್ರಗಳೇಕೆ? |ನೋಡುವರ ಕಣ್ಣೊಲವ ಬೇಡುವಳೆ ಸೃಷ್ಟಿ? ||ಮಾಡುವಾ ಮಾಟಗಳನಾದನಿತು ಬೆಳಗಿಪುದು |ರೂಢಿಯಾ ಪ್ರಕೃತಿಯದು - ಮಂಕುತಿಮ್ಮ ||
ಕಾಯಮಾತ್ರದುದಲ್ಲವಾತ್ಮಮಾತ್ರದುದಲ್ಲ- |ವಾಯೆರಡುಮೊಂದಾಗಲದು ಜೀವಲೀಲೆ ||ತಾಯಿವೊಲು ನಿನಗಾತ್ಮ; ಮಡದಿವೊಲು ಕಾಯವವ- |ರಾಯವನು ಸರಿನೋಡು - ಮಂಕುತಿಮ್ಮ ||
ಕಾಲವಕ್ಷಯದೀಪವದರ ಪಾತ್ರೆಯಪಾರ |ಬಾಳ್ ಅದರಿನಾದೊಂದು ಕಿರುಹಣತೆ ಮಿಣುಕು ||ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು |ತೈಲಧಾರೆಯಖಂಡ - ಮಂಕುತಿಮ್ಮ ||
ಕೆಂಡಮುಸುಡಿಯ ದೈವವೆಲ್ಲವನು ದಹಿಸುತಿರೆ |ದಂಡಧರನತ್ತಲೆಲ್ಲವನು ಕೆಡಹುತಿರೆ ||ಮೊಂಡುಘಾಸಿಯ ಲಾಭ ಪಿಂಡಮಾತ್ರವು ತಾನೆ?ಭಂಡಬಾಳಲೆ ನಮದು? - ಮಂಕುತಿಮ್ಮ ||
ಕೊಲೆಗಡಿಕನೆನಿಪ ಹುಲಿ ಸಲಹದೇಂ ಮರಿಗಳನು? |ಒಲುಮೆಕರುಳಡಗಿಹುದು ಪಗೆತನದ ಪೊಡೆಯೊಳ್ ||ನಲುಮೆಯನು ಹೊರಹೊಮ್ಮಿಸುವುದು ನರನುನ್ನತಿಕೆ |ಒಲವಾತ್ಮ ವಿಸ್ತರಣ - ಮಂಕುತಿಮ್ಮ ||
ಕ್ಷಮೆ ದೋಷಿಗಳಲಿ; ಕೆಚ್ಚೆದೆ ವಿಧಿಯ ಬಿರುಬಿನಲಿ |ಸಮತೆ ನಿರ್ಮತ್ಸರತೆ ಸೋಲ್ಗೆಲವುಗಳಲಿ ||ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು |ಭ್ರಮೆಯೊ ಮಿಕ್ಕೆಲ್ಲ ತಪ - ಮಂಕುತಿಮ್ಮ ||
ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? |ಮತಿಮನಂಗಳ ಕೃಷಿತಪಃಫಲವುಮಂತು ||ಸತತಕೃಷಿ; ಬೀಜಗುಣ; ಕಾಲವರ್ಷಗಳೊದವೆ |ಪ್ರತಿಭೆ ವಿಕಸಿತವಹುದೊ - ಮಂಕುತಿಮ್ಮ ||
ಗಗನ ಬಿಸಿಗವಸಾಗಿ; ಕೆರೆಗಳಾವಿಗೆಯಾಗಿ |ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ||ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ |ಮುಗಿಲವೊಲು ದೈವಕೃಪೆ - ಮಂಕುತಿಮ್ಮ ||
ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ |ಮುಗಿವ ತರಣಿಯ ರಕ್ತ ಹಿತವೆನಿಸದೇಕೊ! ||ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ |ಬಗೆವೆನ್ನ ಮನಸಿನೊಳೊ? - ಮಂಕುತಿಮ್ಮ ||