ಒಟ್ಟು 4119 ಕಡೆಗಳಲ್ಲಿ , 1 ವಚನಕಾರರು , 937 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನೀರ ನೆರೆ ತನ್ನೆದುರಿನಣೆಕಟ್ಟನೊದೆಯುವುದು |ಊರನದು ಕೊಚ್ಚುವುದು ಬದಿಯ ಕಟ್ಟದಿರೆ ||ಏರಿಗಳನಿಕ್ಕೆಲದಿ ನಿಲಿಸೆ ಹರಿವುದು ಸಮನೆ |ಪೌರುಷದ ನದಿಯಂತು - ಮಂಕುತಿಮ್ಮ ||
ನೀರಧಿ ಬ್ರಹ್ಮ; ನೀರ್ಗಲ್ ಜೀವವೆನುತೊಂದು |ಕ್ಷೀರವದು; ಘೃತವಿದದರೊಳಗೆನ್ನುತೊಂದು ||ಕೀರು ಪರಮಾನ್ನವದು; ದ್ರಾಕ್ಷಿಯಿದೆನುತ್ತೊಂದು |ಮೂರಿಂತು ಮತವಿವರ - ಮಂಕುತಿಮ್ಮ ||
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ |ಶೈಲದಚಲತೆಯಿರಲು ಝರಿಯ ವೇಗ ಸೊಗ ||ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು |ವೈಲಕ್ಷಣದ ಚೆಂದ - ಮಂಕುತಿಮ್ಮ ||
ನೀಳುಗರೆ ಬಳುಬಳುಕೆ ಕಡಲತೆರೆಯೊಯ್ಯಾರ |ತಾಳಲಯ ಸೇರೆ ರಾಗದ ನಾಟ್ಯ ಧಾಟಿ ||ಗೋಳದ ಜ್ವಾಲೆಯಿಂ ಗಗನಪಟ ಸಿಂಗಾರ |ವೈಲಕ್ಷಣದೊಳಿಂಬು - ಮಂಕುತಿಮ್ಮ ||
ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ |ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ ||ಬಿಡಿಜೀವ ಸಂಗಾತಿಜೀವಗಳನರಸಿ ತಾಂ |ಪಡೆದಂದು ಪೂರ್ಣವದು - ಮಂಕುತಿಮ್ಮ ||
ನೂತ್ನತೆಯ ಪೂರ್ಣತೆಯನನ್ಯೂನತೆಯ ಗಳಿಪ |ಯತ್ನಮೇ ಪೌರುಷಪ್ರಗತಿ; ಅದೆ ಪ್ರಕೃತಿ ||ವಿಜ್ಞಾನ ಶಾಸ್ತ್ರ ಕಲೆ ಕಾವ್ಯ ವಿದ್ಯೆಗಳೆಲ್ಲ |ಧನ್ಯತೆಯ ಬೆದಕಾಟ - ಮಂಕುತಿಮ್ಮ ||
ನೂರಾರು ಮತವಿಹುದು ಲೋಕದುಗ್ರಾಣದಲಿ |ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ||ಸಾರದಡುಗೆಯನೊಳವಿಚಾರದೊಲೆಯಲಿ ಮಾಡು |ಬೇರೆ ಮತಿ ಬೇರೆ ಮತ - ಮಂಕುತಿಮ್ಮ ||
ನೂರಾರು ಸರಕುಗಳು ಜೀವಿತದ ಸಂತೆಯಲಿ |ಊರಿನವು; ಕೇರಿಯವು; ಮನೆಯಾತ್ಮವದವು ||ಬೇರೆ ಬೇರೆ ಪುರುಳ್ಗೆ ಬೇರೆ ನೆಲೆ; ಬೇರೆ ಬೆಲೆ |ತಾರತಮ್ಯವೆ ತತ್ತ್ವ - ಮಂಕುತಿಮ್ಮ ||
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ |ಪ್ರತ್ಯೇಕ ಜೀವದಶೆಯವನಂಗಭಂಗಿ ||ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ |ಪ್ರತ್ಯಗಾತ್ಮನು ನೀನು - ಮಂಕುತಿಮ್ಮ ||
ನೆನೆನೆನೆದು ಗಹನವನು; ಜೀವನರಹಸ್ಯವನು |ಮನವ ಬಳಲಿಸಿ ಸೋಲಿಸಿರುವ ತತ್ತ್ವವನು ||ಮನನದೇಕಾಂತದಲಿ ಮೌನದ ಧ್ಯಾನದಲಿ |ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ ||
ನೆರಳನಿನಿತನು ಕೊಡುವ; ದಣಿವನಿನಿತನು ಕಳೆವ |ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ ||ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ |ಪರಮಧರ್ಮವದೆಲವೊ - ಮಂಕುತಿಮ್ಮ ||
ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ |ಫಲವದೆಂತಹುದೆಂಬ ಶಂಕೆಗೆಡೆಯುಂಟೆ? ||ಒಳಿತರೊಳೆ ನೀಂ ಬಾಳು; ಪರವದೆಂತಿರ್ಡೊಡೇಂ? |ಇಳೆಯೆ ಬಾಗಿಲು ಪರಕೆ - ಮಂಕುತಿಮ್ಮ ||
ನೆಲವೊಂದೆ; ಹೊಲ ಗದ್ದೆ ತೋಟ ಮರಳೆರೆ ಬೇರೆ |ಜಲವೊಂದೆ; ಸಿಹಿಯುಪ್ಪು ಜವುಗೂಟೆ ಬೇರೆ ||ಕುಲವೊಂದರೊಳೆ ಸೋದರವ್ಯಕ್ತಿಗುಣ ಬೇರೆ |ಹಲವುಮೊಂದುಂ ಸಾಜ - ಮಂಕುತಿಮ್ಮ ||
ನೇತ್ರಯುಗಳಂ ಪಿಡಿಗುಮೊಂದು ಲಕ್ಷ್ಯವ ಕೂಡಿ |ಹಸ್ತಯುಗ ಸಾಧಿಪುದು ಮನದರ್ಥವೊಂದನ್ ||ದ್ವೈತದಿಂದದ್ವೈತವದ್ವೈತದೊಳ್ ದ್ವೈತ |ಚೈತನ್ಯಲೀಲೆಯಿದು - ಮಂಕುತಿಮ್ಮ ||
ನೈರಾಶ್ಯನಿರತಂಗೆ ದೇವತೆಗಳಿಂದೇನು? |ವೈರಾಗ್ಯಪಥಿಕಂಗೆ ನಷ್ಟಭಯವೇನು? ||ಪಾರಂಗತಂಗಂತರಾಳ ದೂರಗಳೇನು? |ಸ್ವೈರಪಥವಾತನದು - ಮಂಕುತಿಮ್ಮ ||