ಒಟ್ಟು 946 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನಿನ್ನೇಳುಬೀಳುಗಳು ನಿನ್ನ ಸೊಗ ಗೋಳುಗಳು |ನಿನ್ನೊಬ್ಬನೋಸುಗವೆ ನಡೆವ ಯೋಜನೆಯೇಂ? ||ಇನ್ನದೆನಿಬರ ಜೀವಪಾಕವದರಿಂದಹುದೊ! |ಛನ್ನವಾ ಋಣಮಾರ್ಗ - ಮಂಕುತಿಮ್ಮ ||
ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ |ಕಳೆವುವದರಲಿ ನಮ್ಮ ಜನುಮಜನುಮಗಳು ||ಗೆಲವಾರ್ಗೊ! ಸೋಲಾರ್ಗೊ! ಲೆಕ್ಕನೋಡುವುದೆಂದೊ |ಫಲವು ಬರಿಯಾಟವೆಲೊ - ಮಂಕುತಿಮ್ಮ ||
ನಿಶಿ ಹಿಂದೆ; ನಿಶಿ ಮುಂದೆ; ನಡುವೆ ಮಿಸುಕಾಟ ಬಾಳ್ |ನಿಶಿ ಕೆಲವರಿಗೆ ಸೊನ್ನೆ; ಕೆಲವರಿಗೆ ಗುಟ್ಟು ||ಮಸಕಿನಲಿ ಭೂತವೊಂದಿಹುದು ದಿಟವಾದೊಡದ- |ರುಸಿರು ಸೋಕದೆ ನಿನ್ನ? - ಮಂಕುತಿಮ್ಮ ||
ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ? |ಶಶಿರವಿಗಳವನ ಮನೆಕಿಟಕಿಯಾಗಿರರೇಂ? ||ಮಸಕುಬೆಳಕೊಂದಾದ ಸಂಜೆಮಂಜೇನವನು |ಮಿಸುಕಿ ಸುಳಿಯುವ ಸಮಯ? - ಮಂಕುತಿಮ್ಮ ||
ನೀರ ನೆರೆ ತನ್ನೆದುರಿನಣೆಕಟ್ಟನೊದೆಯುವುದು |ಊರನದು ಕೊಚ್ಚುವುದು ಬದಿಯ ಕಟ್ಟದಿರೆ ||ಏರಿಗಳನಿಕ್ಕೆಲದಿ ನಿಲಿಸೆ ಹರಿವುದು ಸಮನೆ |ಪೌರುಷದ ನದಿಯಂತು - ಮಂಕುತಿಮ್ಮ ||
ನೀರಧಿ ಬ್ರಹ್ಮ; ನೀರ್ಗಲ್ ಜೀವವೆನುತೊಂದು |ಕ್ಷೀರವದು; ಘೃತವಿದದರೊಳಗೆನ್ನುತೊಂದು ||ಕೀರು ಪರಮಾನ್ನವದು; ದ್ರಾಕ್ಷಿಯಿದೆನುತ್ತೊಂದು |ಮೂರಿಂತು ಮತವಿವರ - ಮಂಕುತಿಮ್ಮ ||
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ |ಶೈಲದಚಲತೆಯಿರಲು ಝರಿಯ ವೇಗ ಸೊಗ ||ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು |ವೈಲಕ್ಷಣದ ಚೆಂದ - ಮಂಕುತಿಮ್ಮ ||
ನೀಳುಗರೆ ಬಳುಬಳುಕೆ ಕಡಲತೆರೆಯೊಯ್ಯಾರ |ತಾಳಲಯ ಸೇರೆ ರಾಗದ ನಾಟ್ಯ ಧಾಟಿ ||ಗೋಳದ ಜ್ವಾಲೆಯಿಂ ಗಗನಪಟ ಸಿಂಗಾರ |ವೈಲಕ್ಷಣದೊಳಿಂಬು - ಮಂಕುತಿಮ್ಮ ||
ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ |ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ ||ಬಿಡಿಜೀವ ಸಂಗಾತಿಜೀವಗಳನರಸಿ ತಾಂ |ಪಡೆದಂದು ಪೂರ್ಣವದು - ಮಂಕುತಿಮ್ಮ ||
ನೂತ್ನತೆಯ ಪೂರ್ಣತೆಯನನ್ಯೂನತೆಯ ಗಳಿಪ |ಯತ್ನಮೇ ಪೌರುಷಪ್ರಗತಿ; ಅದೆ ಪ್ರಕೃತಿ ||ವಿಜ್ಞಾನ ಶಾಸ್ತ್ರ ಕಲೆ ಕಾವ್ಯ ವಿದ್ಯೆಗಳೆಲ್ಲ |ಧನ್ಯತೆಯ ಬೆದಕಾಟ - ಮಂಕುತಿಮ್ಮ ||
ನೂರಾರು ಮತವಿಹುದು ಲೋಕದುಗ್ರಾಣದಲಿ |ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ||ಸಾರದಡುಗೆಯನೊಳವಿಚಾರದೊಲೆಯಲಿ ಮಾಡು |ಬೇರೆ ಮತಿ ಬೇರೆ ಮತ - ಮಂಕುತಿಮ್ಮ ||
ನೂರಾರು ಸರಕುಗಳು ಜೀವಿತದ ಸಂತೆಯಲಿ |ಊರಿನವು; ಕೇರಿಯವು; ಮನೆಯಾತ್ಮವದವು ||ಬೇರೆ ಬೇರೆ ಪುರುಳ್ಗೆ ಬೇರೆ ನೆಲೆ; ಬೇರೆ ಬೆಲೆ |ತಾರತಮ್ಯವೆ ತತ್ತ್ವ - ಮಂಕುತಿಮ್ಮ ||
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ |ಪ್ರತ್ಯೇಕ ಜೀವದಶೆಯವನಂಗಭಂಗಿ ||ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ |ಪ್ರತ್ಯಗಾತ್ಮನು ನೀನು - ಮಂಕುತಿಮ್ಮ ||
ನೆನೆನೆನೆದು ಗಹನವನು; ಜೀವನರಹಸ್ಯವನು |ಮನವ ಬಳಲಿಸಿ ಸೋಲಿಸಿರುವ ತತ್ತ್ವವನು ||ಮನನದೇಕಾಂತದಲಿ ಮೌನದ ಧ್ಯಾನದಲಿ |ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ ||
ನೆರಳನಿನಿತನು ಕೊಡುವ; ದಣಿವನಿನಿತನು ಕಳೆವ |ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ ||ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ |ಪರಮಧರ್ಮವದೆಲವೊ - ಮಂಕುತಿಮ್ಮ ||