ಒಟ್ಟು 946 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪರಬೊಮ್ಮನೀ ಜಗವ ರಚಿಸಿದವನಾದೊಡದು |ಬರಿಯಾಟವೋ ಕನಸೊ ನಿದ್ದೆ ಕಲವರವೋ? ||ಮರುಳನವನಲ್ಲದೊಡೆ ನಿಯಮವೊಂದಿರಬೇಕು |ಗುರಿಗೊತ್ತದೇನಿಹುದೊ? - ಮಂಕುತಿಮ್ಮ ||
ಪರಮಪದದಲಿ ನೋಡು : ಬೇರುಗಳ್ ವ್ಯೋಮದಲಿ |ಧರೆಗಿಳಿದ ಕೊಂಬುರಂಬೆಗಳು; ಬಿಳಲುಗಳು ||ಚಿರಂಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ |ಪರಿಕಿಸಿದರರ್ಥವನು - ಮಂಕುತಿಮ್ಮ ||
ಪರಮಲಾಭವ ಗಳಿಸೆ ಜೀವಿತವ್ಯಾಪಾರ- |ಕಿರಬೇಕು ಮೂಲಧನವದು ತತ್ತ್ವದೃಷ್ಟಿ ||ಚಿರಲಾಭ ಜಗದಾತ್ಮಲೀಲಾವಿಹಾರಸುಖ |ಧರೆಯ ಸುಖ ಮೇಲ್ಬಡ್ಡಿ - ಮಂಕುತಿಮ್ಮ ||
ಪರಮಾಣುವಿಂ ಪ್ರಪಂಚಗಳ ಸಂಯೋಜಿಪುದು |ಮರೆಯಿಂದ ಸೃಷ್ಟಿಯಂತ್ರವ ಚಾಲಿಸುವುದು ||ಚರಲೀಲೆಯಲಿ ಜೀವವೆನಿಪ ಚೈತನ್ಯವದು |ಪರಸತ್ತ್ವಶಕ್ತಿಯೆಲೊ - ಮಂಕುತಿಮ್ಮ ||
ಪರಮೇಷ್ಠಿ ನಿಜಚಾತುರಿಯನಳೆಯೆ ನಿರವಿಸಿದ |ನೆರಡುಕೈಯಿಂದೆರಡು ಜಂತುಗಳ ಬಳಿಕ ||ಇರದೆ ತಾನವನೊಂದುಗೂಡಿಸಲು ಬೆರಗಾಯ್ತು |ನರಿಯು ವಾನರವು ನರ - ಮಂಕುತಿಮ್ಮ ||
ಪರಹಿತದ ಮಾತಿರಲಿ; ಪರರಿನೇ ಜೀವಿಪನು |ನರಜಂತು; ಪಶು ಪಕ್ಷಿ ಕೀಟ ಮೀನ್ಗಳವೋಲ್ ||ಪರರಿನೆಳಸದದೇನನುಂ ಪರರಿಗುಪಕರಿಪ |ತರುಜನ್ಮವಲ ಪುಣ್ಯ! - ಮಂಕುತಿಮ್ಮ ||
ಪರಿಪರಿ ಪರೀಕ್ಷೆಗಳು; ಪರಿಭವದ ಶಿಕ್ಷೆಗಳು |ಗರಡಿಯ ವ್ಯಾಯಾಮ ಮನಬುದ್ಧಿಗಳಿಗೆ ||ಪುರುಷತೆಗೆ ಪೆಟ್ಟುಗಳಿನಾದ ಗಂತಿಯೆ ವಿಜಯ |ಬಿರಿದ ನನೆ ಫಲಕೆ ಮನೆ - ಮಂಕುತಿಮ್ಮ ||
ಪರಿಪರಿಯ ರೂಪಕಾಂತಿಗಳ ಕಣ್ಣಾಗಿಸುವ |ಪರಿಪರಿಯ ಫಲಮಧುರಗಳ ರಸನೆಗುಣಿಪ ||ಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವ |ಗುರು ಸೃಷ್ಟಿ ರಸಿಕತೆಗೆ - ಮಂಕುತಿಮ್ಮ ||
ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ |ಚರಿಸುತಿರೆ ನರನದರ ಗುರುತನರಿಯದೆಯೆ ||ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ |ತೊರೆಯುವನು ದೊರೆತುದನು - ಮಂಕುತಿಮ್ಮ ||
ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ |ನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ ||ಕೆರಳಿಸುತ ಹಸಿವುಗಳ; ಸವಿಗಳನು ಕಲಿಸುವಳು |ಗುರು ರುಚಿಗೆ ಸೃಷ್ಟಿಯಲ - ಮಂಕುತಿಮ್ಮ ||
ಪರಿಪರಿಯ ವಿಶ್ವಪ್ರಕೃತಿಶಕ್ತಿತೇಜಗಳು |ಕೆರಳಿಸಲು ನರಹೃದಯರಭಸಗಳನದರಿಂ ||ಪೊರಮಡುವ ಸಂಮೋಹಧೀರಗಂಭೀರಗಳ |ಸರಸತೆಯೆ ಸುಂದರವೊ - ಮಂಕುತಿಮ್ಮ ||
ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ |ತಿರುಗಿಸಲು ತನ್ನ ದೃಷ್ಟಿಯನು ನಿರ್ಮಲದಿಂ ||ನಿರತಿಶಯ ಸುಖವಲ್ಲಿ; ವಿಶ್ವಾತ್ಮವೀಕ್ಷೆಯಲಿ |ಪರಸತ್ತ್ವಶಾಂತಿಯಲಿ - ಮಂಕುತಿಮ್ಮ ||
ಪರಿಮಿತಿಯನರಿತಾಶೆ; ಪರವಶತೆಯಳಿದ ಸುಖ |ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ ||ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ |ವರಗಳೀ ನಾಲ್ಕೆ ವರ - ಮಂಕುತಿಮ್ಮ ||
ಪಾಕ ನಿನ್ನೊಳದೊಂದು ಸಾಗುತಿಹುದೆಡೆಬಿಡದೆ |ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು ||ಸಾಕುಬೇಕುಗಳೆಲ್ಲವದರಿನಾ ಯಂತ್ರವನು |ಏಕೆ ರಚಿಸಿದನೊ ವಿಧಿ! - ಮಂಕುತಿಮ್ಮ ||
ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? |ಆತುಮದ ಪರಿಕಥೆಯನರಿತವರೆ ನಾವು? ||ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ |ನೀತಿ ನಿಂದೆಯೊಳಿರದು - ಮಂಕುತಿಮ್ಮ ||