ಒಟ್ಟು 72 ಕಡೆಗಳಲ್ಲಿ , 1 ವಚನಕಾರರು , 69 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮನೆಯ ಸಂಸಾರದಲಿ ವಾಸವಿರುತಾಗಾಗ |ನೆನೆದು ನೀಂ ದೇಗುಲಕೆ ಪೋಗಿಬರುವಂತೆ ||ದಿನವೆಲ್ಲ ದೇವಸನ್ನಿಧಿಯೊಳಿರುತಾಗಾಗ |ಮನೆಗೆ ಬರುವನವೊಲಿರು - ಮಂಕುತಿಮ್ಮ ||
ಮನೆಯ ಸುಡುತಿಹ ಬೆಂಕಿಯುರಿಯನಾರಿಸೆ ನುಗ್ಗು |ಮನವ ಸುಡುವುರಿಯಿಂದ ದೂರ ನೀಂ ನಿಲ್ಲು ||ತನುವಿಗುಪಕೃತಿಗೆಯ್ವ ಭರದಿ ನೀನಾತುಮದ |ಅನುನಯವ ಕೆಡಿಸದಿರು - ಮಂಕುತಿಮ್ಮ ||
ಮಾಯೆಯೇ ಸರಸಿ; ನಿರ್ಗುಣ ಸತ್ತ್ವದಿಂದೇನು? |ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ? ||ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು |ತಾಯವಳು ನೀಂ ಮಗುವು - ಮಂಕುತಿಮ್ಮ ||
ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ |ಮಾಯಿಪಳು ಗಾಯಗಳನೀವಳಿಷ್ಟಗಳ ||ಮೈಯ ನೀಂ ಮರೆಯೆ ನೂಕುವಳಾಗ ಪಾತಳಕೆ |ಪ್ರೇಯಪೂತನಿಯವಳು - ಮಂಕುತಿಮ್ಮ ||
ಮುಗ್ಧನಾಗದೆ ಭುಜಿಸು ಭುಜಿಸಲಿಹುದನು ಜಗದಿ |ಮಾಧ್ವೀಕ ಭಯವಿರದು ಜಾಗರೂಕನಿಗೆ ||ದೃಗ್ದೃಶ್ಯಚಿತ್ರಪ್ರಪಂಚದಲಿ ಸೇರಿ ನೀಂ |ಮುಗ್ಧನಾಗದೆ ಸುಖಿಸು - ಮಂಕುತಿಮ್ಮ ||
ಮುಸುಕಿಹುದು ಹುಟ್ಟಳಿವುಗಳ ಕಾರಣವ ಮಬ್ಬು |ಮಸಕಿನಲಿ ಹುದುಗಿಹವು ಮೋಹಮೂಲಗಳು ||ನಿಶಿ ಮುಚ್ಚಿಹುದು ದಿನಪಚಂದಿರರ ಹುಟ್ಟೆಡೆಯ |ಮಿಸುಕುವ ರಹಸ್ಯ ನೀಂ - ಮಂಕುತಿಮ್ಮ ||
ಮೇರುಪರ್ವತಕಿಹುವು ನೂರೆಂಟು ಶಿಖರಗಳು |ದಾರಿ ನೂರಿರಬಹುದು; ನಿಲುವ ಕಡೆ ನೂರು ||ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ |ಮೇರುಸಂಸ್ಕೃತಿಯೆ ಬಲ - ಮಂಕುತಿಮ್ಮ ||
ಮೋಹನಾನಂದಭೈರವಿ ಶಂಕರಾಭರಣ |ಶಾಹನ ಕುರಂಜಿ ಕೇದಾರ ಕಾಪಿಗಳ ||ಮೋಹ ಸರ್ವಸ್ವಗಳ ರಾಗಾಬ್ಧಿಯೋ ಬ್ರಹ್ಮ |ಗಾಹಿಸದರೊಳಗೆ ನೀಂ - ಮಂಕುತಿಮ್ಮ ||
ಮೌನದಿಂದಂಬಲಿಯನುಂಡು ತಣಿಯುವ ಮಾನಿ |ಶ್ವಾನನುಣುವೆಂಜಲೋಗರಕೆ ಕರುಬುವನೆ? ||ಜ್ಞಾನಿ ನಡೆವಂ ವಿಷಯ ತರತಮವಿವೇಕದಲಿ |ಮಾಣು ನೀಂ ತಲ್ಲಣವ - ಮಂಕುತಿಮ್ಮ ||
ರಾಮನಿರ್ದಂದು ರಾವಣನೊಬ್ಬನಿರ್ದನಲ |ಭೀಮನಿರ್ದಂದು ದುಶ್ಯಾಸನನದೊರ್ವನ್ ||ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು? |ರಾಮಭಟನಾಗು ನೀಂ - ಮಂಕುತಿಮ್ಮ ||
ರೇಖಾರಹಸ್ಯಗಳು ನಿನ್ನ ಹಣೆಯವದಿರಲಿ |ನೀಂ ಕಾಣ್ಪ ರೂಪಭಾವಂಗಳೊಳಮಿಹುವು ||ತಾಕಿ ನಿನ್ನಾತುಮವ ನಾಕನರಕಂಗಳಂ |ಏಕವೆನಿಪುವು ನಿನಗೆ - ಮಂಕುತಿಮ್ಮ ||
ಲೋಚನದ ಸಂಚಾರ ಮುಖದ ಮುಂದಕಪಾರ |ಗೋಚರಿಪುದೇನದಕೆ ತಲೆಯ ಹಿಂದಣದು? ||ಪ್ರಾಚೀನ ಹೊರತು ಸ್ವತಂತ್ರ ನೀಂ; ಸಾಂತವದು |ಚಾಚು ಮುಂದಕೆ ಮನವ - ಮಂಕುತಿಮ್ಮ ||
ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ |ಪ್ರಹರಿಸರಿಗಳನನಿತು ಯುಕ್ತಗಳನರಿತು ||ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು |ವಿಹರಿಸಾತ್ಮಾಲಯದಿ - ಮಂಕುತಿಮ್ಮ ||
ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು |ಅಧಿಕಾರಿ ನೀನಲ್ಲ; ವಿಧಿ ಬೆಪ್ಪನಲ್ಲ ||ಹದವರಿತು ವಿಧಿ ತಾನೆ ಕುದುರಿಸುವನೆಲ್ಲವನು |ಅದಟದಿರು ನೀನವನ - ಮಂಕುತಿಮ್ಮ ||
ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? |ಬೆದರಿಕೆಯನದರಿಂದ ನೀಗಿಪನು ಸಖನು ||ಎದೆಯನುಕ್ಕಾಗಿಸಾನಿಸು ಬೆನ್ನ; ತುಟಿಯ ಬಿಗಿ |ವಿಧಿಯಗಸ; ನೀಂ ಕತ್ತೆ - ಮಂಕುತಿಮ್ಮ ||