ಒಟ್ಟು 156 ಕಡೆಗಳಲ್ಲಿ , 1 ವಚನಕಾರರು , 135 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತನ್ನ ಮನದಾಟಗಳ ತಾನೆ ನೋಡುತ ನಗುವ |ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |ಧನ್ಯತೆಯ ಕಂಡವನು - ಮಂಕುತಿಮ್ಮ ||
ತಿರುಕ ನೀನೀ ಬ್ರಹ್ಮಪುರಿಯೊಳದ ಮರೆಯದಿರು |ಸಿರಿಯಿರ್ದೊಡೇನು? ಪರಿಜನವಿರ್ದೊಡೇನು? ||ತೊರೆದೆಲ್ಲ ಡಂಭಗಳ ನೀನೆ ನಿನ್ನಾಳಾಗು |ಪರದೇಶಿವೊಲು ಬಾಳು - ಮಂಕುತಿಮ್ಮ ||
ತೆರಿಗೆಗಳು ಹಲವುಂಟು ಪ್ರಕೃತಿಗಂ ಸಲ್ಲುವುವು |ತೆರದೆ ನೀಂ ಮರೆಯೆ ದಂಡಿಪಳಾಕೆ ಮುನಿದು ||ಕರಣಂಗಳಾಕೆಯವು ಮಿತದೊಳವುಗಳ ಬಳಸಿ |ತೆರು ಸಲುವ ಬಾಡಿಗೆಯ - ಮಂಕುತಿಮ್ಮ ||
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ |ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ||ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ |ಬಾಯ ಚಪ್ಪರಿಸುವನು - ಮಂಕುತಿಮ್ಮ ||
ದಾರಿಗುರಿಗಳ ಗೊತ್ತು ಕಗೆಗುಂಟೇನಯ್ಯಾ? |ಆರ ಮನೆ ಸಂಡಿಗೆಯೊ; ಚುಂಡಿಲಿಯೊ; ಹುಳುವೋ ||ಆರ ಪಿಂಡವೊ; ಏನೊ; ಎಂತೊ; ಆ ಬಾಳ ಗತಿ! |ಮೀರಿದವನೇಂ ನೀನು? - ಮಂಕುತಿಮ್ಮ ||
ದೈವಕೃಪೆಯೆನುವುದೇಂ? ಪರಸತ್ತ್ವನವವೃಷ್ಟಿ |ಜೀವಗುಣ ಪಕ್ವಪಟ್ಟಂತದರ ವೇಗ ||ಭಾವಚೋದನೆಗಳಲಿ ಬಾಹ್ಯಸಾಧನೆಗಳಲಿ |ತೀವಿ ದೊರೆಕೊಳುವುದದು - ಮಂಕುತಿಮ್ಮ ||
ಧಾರುಣೀಸುತೆಯವೊಲು ದೃಢಮನಸ್ಕರದಾರು? |ಮಾರೀಚಹರಿಣವಡ್ಡಾಡಲೇನಾಯ್ತು? ||ವಾರಿಧಿಯೊಳಡಗಿ ನಿದ್ರಿಪ ಬಾಡವವೊ ತೃಷ್ಣೆ |ಆರದನು ಕೆರಳಿಪರೊ! - ಮಂಕುತಿಮ್ಮ ||
ನಗು; ಮನದಿ ಲೋಗರ ವಿಕಾರಂಗಳನು ನೋಡಿ |ಬಿಗಿ ತುಟಿಯ; ದುಡಿವಂದು ನೋವಪಡುವಂದು ||ಪೊಗು; ವಿಶ್ವಜೀವನದ ಜೀವಾಂತರಂಗದಲಿ |ನಗುನಗುತ ಬಾಳ್; ತೆರಳು - ಮಂಕುತಿಮ್ಮ ||
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ |ನಗುವ ಕೇಳುತ ನಗುವುದತಿಶಯದ ಧರ್ಮ ||ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ||
ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ |ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? ||ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ |ಗುರುವೆಂದು ಕರೆಯುವೆಯ? - ಮಂಕುತಿಮ್ಮ ||
ನಲಿಸುವೊಲಿಸುವ; ಕೆಣಕಿ ಕಾಡಿಸುವ; ಮುಳಿಯಿಸುವ |ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳಂ ||ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ |ಇಳೆಯಂಚೆಯಾಳು ನೀಂ - ಮಂಕುತಿಮ್ಮ ||
ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು? |ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ ||ಬಾಚಿಕೊಳಲಮೃತಕಣಗಳನ್ನೆಲ್ಲ ತನ್ನೆಡೆಗೆ |ಸಾಜ ಸೊಗವಾತ್ಮಂಗೆ - ಮಂಕುತಿಮ್ಮ ||
ನಾಟಕದೊಳನುವಿಂದ ಬೆರೆತದನು ಮೆಚ್ಚೆನಿಸಿ |ನೋಟಕನುಮಾಗಿ ತಾಂ ನಲಿದು ನಲಿಯಿಸುವಾ ||ಪಾಠವನು ಕಲಿತವನೆ ಬಾಳನಾಳುವ ಯೋಗಿ |ಆಟಕಂ ನಯವುಂಟು - ಮಂಕುತಿಮ್ಮ ||
ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? |ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ||ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ |ಅನಲನೆಲ್ಲರೊಳಿಹನು - ಮಂಕುತಿಮ್ಮ ||
ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆಯೇಂ? |ಅನ್ಯಶಕ್ತಿಗಳೆನಿತೊ ಬೆರೆತಿರುವುವಲ್ಲಿ ||ಅನ್ನವಿಡುವರು; ತಿಳಿವನೀವರ್; ಒಡನಾಡುವರು |ನಿನ್ನ ಬಾಳ್ಗಿವರಿರರೆ? - ಮಂಕುತಿಮ್ಮ ||