ಒಟ್ಟು 946 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ |ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ||ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ |ಎತ್ತಲಿದಕೆಲ್ಲ ಕಡೆ? - ಮಂಕುತಿಮ್ಮ ||
ಮುದಿಕುರುಡಿ ಹೊಂಗೆಯನು ``ಬಾದಾಮಿ; ಕೋ'ಯೆನುತ |ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? ||ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣಿಹುದೆ? |ಸುಧೆ ಬಂತೆ ಸುಲಭದಲಿ? - ಮಂಕುತಿಮ್ಮ ||
ಮುಂದೇನೊ; ಮತ್ತೇನೊ; ಇಂದಿಗಾ ಮಾತೇಕೆ? |ಸಂದರ್ಭ ಬರಲಿ; ಬಂದಾಗಳಾ ಚಿಂತೆ ||ಹೊಂದಿಸುವನಾರೊ; ನಿನ್ನಾಳಲ್ಲ; ಬೇರಿಹನು |ಇಂದಿಗಿಂದಿನ ಬದುಕು - ಮಂಕುತಿಮ್ಮ ||
ಮುನ್ನಾದ ಜನುಮಗಳ ನೆನಸಿನಿಂ ನಿನಗೇನು? |ಇನ್ನುಮಿಹುದಕೆ ನೀಡು ಮನವನ್; ಎನ್ನುವವೋಲ್ ||ಬೆನ್ನ ಪಿಂತಿನದು ಕಾಣಿಸದಂತೆ ಪರಮೇಷ್ಠಿ |ಕಣ್ಣನಿಟ್ಟನು ಮುಖದಿ - ಮಂಕುತಿಮ್ಮ ||
ಮುಸುಕಿಹುದು ಹುಟ್ಟಳಿವುಗಳ ಕಾರಣವ ಮಬ್ಬು |ಮಸಕಿನಲಿ ಹುದುಗಿಹವು ಮೋಹಮೂಲಗಳು ||ನಿಶಿ ಮುಚ್ಚಿಹುದು ದಿನಪಚಂದಿರರ ಹುಟ್ಟೆಡೆಯ |ಮಿಸುಕುವ ರಹಸ್ಯ ನೀಂ - ಮಂಕುತಿಮ್ಮ ||
ಮುಳುಗದಿರು; ಜೀವನದ ತೆರೆಯ ಮೇಲೀಜುತಿರು |ಒಳಿತನಾಗಿಸು; ಕೊಡುತ ಕೊಳುತ ಸಂತಸವ ||ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು |ಮಿಳಿತನಿರು ವಿಶ್ವದಲಿ - ಮಂಕುತಿಮ್ಮ ||
ಮೂರಿರಲಿ ವಾದ; ಮುನ್ನೂರಿರಲಿ; ಸಕಲರುಂ |ಸಾರವಸ್ತುವನೊಂದನೊಪ್ಪಿಕೊಳುವವರೇ ||ಪಾರಮಾರ್ಥಿಕವನಂತೆಣಿಸಿದ ವ್ಯವಹಾರ |ಭಾರವಾಗದು ಜಗಕೆ - ಮಂಕುತಿಮ್ಮ ||
ಮೂಲವಸ್ತುವದೊಂದು ಲೀಲೆಗೋಸುಗ ನೂರು |ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ||ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯದ ತಾಳಿ |ಆಳುತಿರು ಜೀವನವ - ಮಂಕುತಿಮ್ಮ ||
ಮೃಗಶೇಷವಿರುವನಕ ಜಗಳ ತಪ್ಪದು ಜಗದಿ |ಹಗೆಗೆ ಕೊಲದವರು ಹಸಿವಿನಿಂದ ಕೊಂದಾರು ||ಟಗರುಜೂಜೋ ಸಭೆಯ ರಗಳೆಯೋ ಕುಸ್ತಿಯೋ |ಸೊಗ ಜನಕೆ ರಣರಂಗ - ಮಂಕುತಿಮ್ಮ ||
ಮೃತನ ಸಂಸಾರಕಥೆ ಶವವಾಹಕರಿಗೇಕೆ? |ಸತಿಯು ಗೋಳಿಡಲಿ; ಸಾಲಿಗನು ಬೊಬ್ಬಿಡಲಿ ||ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು |ಧೃತಿಯ ತಳೆ ನೀನಂತು - ಮಂಕುತಿಮ್ಮ ||
ಮೃತ್ಯು ತಾಂ ಬಂದು ಮೋಹಿನಿಯ ರೂಪದಿ ನಿನ್ನ |ಚಿತ್ತವನು ಸೆರೆವಿಡಿದು ನೆತ್ತರನು ಬಸಿದು ||ನಿತ್ಯ ನಿನ್ನಸುವ ಲವ ಲವ ಪೀರುತಲಿ ದೀರ್ಘ |ಹತ್ಯೆಯಲಿ ಹರುಷಿಪಳೊ - ಮಂಕುತಿಮ್ಮ ||
ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ |ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? |ಸತ್ರ ಹೊಸದಿಹುದು ನಡೆ - ಮಂಕುತಿಮ್ಮ ||
ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ |ಅನುವಪ್ಪುದೊಂದೊಂದು ರೋಗಕೊಂದೊಂದು ||ನಿನಗಮಂತೆಯೆ ನೂರು ನೀತಿಸೂತ್ರಗಳಿರಲು |ಅನುವನರಿವುದೆ ಜಾಣು - ಮಂಕುತಿಮ್ಮ ||
ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ |ಧರಣಿಯವು; ಗಗನದವು; ಮನುಜಯತ್ನದವು ||ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ |ಅರಿವುಳ್ಳೊಲುಮೆ ಪಿರಿದು - ಮಂಕುತಿಮ್ಮ ||
ಮೇರುಪರ್ವತಕಿಹುವು ನೂರೆಂಟು ಶಿಖರಗಳು |ದಾರಿ ನೂರಿರಬಹುದು; ನಿಲುವ ಕಡೆ ನೂರು ||ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ |ಮೇರುಸಂಸ್ಕೃತಿಯೆ ಬಲ - ಮಂಕುತಿಮ್ಮ ||