ಒಟ್ಟು 946 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಲಾವಣ್ಯವಾತ್ಮಗುಣವದರಿಂದೆ ಲೋಕಜನ |ದೇವವನು ಕಮನೀಯ ವಿಗ್ರಹಂಗಳಲಿ ||ಭಾವಿಸುತ ತಮ್ಮಿಷ್ಟಭೋಗಗಳನರ್ಪಿಸುವ |ಸೇವೆಯಿಂ ನಲಿಯುವರು - ಮಂಕುತಿಮ್ಮ ||
ಲೀಲೆಯೇಂ ಬಾಳೆಲ್ಲ? ಛೀ ತಳ್ಳು ಹಾಸ್ಯವನು |ಬಾಲರೇಂ ನಾವಿನ್ನುಮೆನುತ ಪಲ್ಕಡಿದು ||ಖೇಲನವ ಬೇಡವೆನುವರನು ವಿಧಿರಾಯನವ--- |ಹೇಳಿಪನು ಸೆರೆವಿಡಿದು - ಮಂಕುತಿಮ್ಮ ||
ಲೋಕಜೀವನದೆ ಮಾನಸದ ಪರಿಪಾಕವಾ |ಪಾಕದಿಂ ಮತಿಶುದ್ಧಿಯದರಿನೊಳದೃಷ್ಟಿ ||ಸಾಕಲ್ಯದಾತ್ಮ ಸಂದರ್ಶನಕೆ ಕರಣವದು |ಲೋಕದಿಂ ನಿರ್ಲೋಕ - ಮಂಕುತಿಮ್ಮ ||
ಲೋಕದಲಿ ಭಯವಿರಲಿ; ನಯವಿರಲಿ; ದಯೆಯಿರಲಿ |ನೂಕುನುಗ್ಗುಗಳತ್ತ; ಸೋಂಕುರೋಗಗಳು ||ಸಾಕಿ ಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ |ಲೋಕ ಮೂಲವು ನೋಡೊ - ಮಂಕುತಿಮ್ಮ ||
ಲೋಕವೆಲ್ಲವು ಚಿತ್ರವಿಂದ್ರಜಾಲದ ಕೃತ್ಯ |ಸಾಕೆನದೆ ಬೇಕೆನದೆ ನೋಡು ನೀನದನು ||ತಾಕಿಸದಿರಂತರಾತ್ಮಂಗಾವಿಚಿತ್ರವನು |ಹಾಕು ವೇಷವ ನೀನು - ಮಂಕುತಿಮ್ಮ ||
ಲೋಕವೆಲ್ಲವು ದೈವಲೀಲೆಯೆಂಬರೆ; ಪೇಳಿ |ಶೋಕ ಸೋಂಕಿರದೊಡಾ ಲೀಲೆ ನೀರಸವೇಂ? ||ಮೂಕಂಗೆ ಕಳ್ ಕುಡಿಸಿ ಚೇಳ್ ಕುಟಕಿಪಾಟವಿದು |ಏಕಪಕ್ಷದ ಲೀಲೆ - ಮಂಕುತಿಮ್ಮ ||
ಲೋಚನದ ಸಂಚಾರ ಮುಖದ ಮುಂದಕಪಾರ |ಗೋಚರಿಪುದೇನದಕೆ ತಲೆಯ ಹಿಂದಣದು? ||ಪ್ರಾಚೀನ ಹೊರತು ಸ್ವತಂತ್ರ ನೀಂ; ಸಾಂತವದು |ಚಾಚು ಮುಂದಕೆ ಮನವ - ಮಂಕುತಿಮ್ಮ ||
ವಕ್ತ್ರವುಂಟೆಲ್ಲರಿಗೆ; ವರ್ಚಸೋರೊರ್ವರಿಗೆ |ಕತ್ತಿ ಪಣ್ಯದೊಳುಂಟು; ಶಕ್ತಿ ಸಹಜದಲಿ ||ವ್ಯಕ್ತಿಪ್ರಭಾವವೀ ಲೋಕಚರಿತೆಯ ಕೀಲು |ಹಸ್ತವದು ದೈವಕೆಲೊ - ಮಂಕುತಿಮ್ಮ ||
ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮ |ಪ್ರಾಕೃತಧ್ವನಿಮಿಶ್ರವದರಡುಗೆ ರಾಗ ||ವ್ಯಾಕೃತದಿನವ್ಯಾಕೃತಾದಿಸತ್ತ್ವಕೆ ನಿನ್ನ |ಜಾಗೃತಿಪ ಮತಿ ಧರ್ಮ - ಮಂಕುತಿಮ್ಮ ||
ವನಜಂತುಗಳ ಸಸ್ಯಮೂಲಿಕಾಹಾರದಿಂ |ಗುಣವನರಿತವರಾದಿವೈದ್ಯರೌಷಧದೊಳ್ ||ಒಣತರ್ಕಗಳಿನೇನು? ಜೀವನದ ವಿವಿಧರಸ- |ದನುಭವದಿ ತತ್ತ್ವವೆಲೊ - ಮಂಕುತಿಮ್ಮ ||
ವನದಿ ನಿರ್ಜನದಿ ಮೌನದಿ ತಪವನೆಸಗುವನ |ನೆನಪಿನಲಿ ಪಿಂತಿನನುಭವವುಳಿಯದೇನು? ||ಇನಿನೋಟ ಸವಿಯೂಟ ಕಿನಿಸು ಕರುಬುಗಳಾಟ |ಕನಲುತಿಹುವಾಳದಲಿ - ಮಂಕುತಿಮ್ಮ ||
ವನ್ಯಮೃಗಗಳ ನಡುವೆ ಗೋವು ಬಂದೇನಹುದು? |ಪಣ್ಯವೀಧಿಯಲಿ ತಾತ್ತ್ವಿಕನಿಗೇನಹುದು? ||ಅನ್ಯಾಯದುನ್ಮತ್ತ ಕೋಲಾಹಲದ ಲೋಕ |ಪುಣ್ಯವನು ಚಿಂತಿಪುದೆ? - ಮಂಕುತಿಮ್ಮ ||
ವಸ್ತುವಿಜ್ಞಾನದಿಂ ಜೀವನಸಮೃದ್ಧಿ ಮಿಗೆ |ವಿಸ್ತರಿಸೆ ವಿಶ್ವೈಕ್ಯಭಾವ ಜನಮನದೊಳ್ ||ದೃಷ್ಟಲೋಕದ ಬೆಡಗದೃಷ್ಟವನು ಮರಸದಿರೆ |ಸ್ವಸ್ತಿ ಲೋಕಕೆಲ್ಲ - ಮಂಕುತಿಮ್ಮ ||
ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ |ಪ್ರಹರಿಸರಿಗಳನನಿತು ಯುಕ್ತಗಳನರಿತು ||ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು |ವಿಹರಿಸಾತ್ಮಾಲಯದಿ - ಮಂಕುತಿಮ್ಮ ||
ವಾಯುವಂ ಕಾಣ್ಬನಾರ್? ತತ್ಕ್ರಿಯೆಯ ಕಾಣನಾರ್? |ಮಾಯೆಯಂತಪರೀಕ್ಷ್ಯಸತ್ತ್ವದೀಕ್ಷ್ಯಕೃತಿ ||ರಾಯನಂ ಕಾಣಲಾಗದೆ ಮಂತ್ರಿಯೆಡೆಸಾರ್ವ |ದೇಯಾರ್ಥಿವೊಲು ನೀನು - ಮಂಕುತಿಮ್ಮ ||