ಒಟ್ಟು 950 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ? |ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ? ||ಕರ್ತನಾಲೋಚಿಸದ ದುಂದಿನವನೆಂಬ ನುಡಿ |ಯರ್ಧದೃಷ್ಟಿಯ ವಿವರ - ಮಂಕುತಿಮ್ಮ ||
ವ್ಯಸನಕಾರಣವೊಂದು ಹಸನಕಾರಣವೊಂದು |ರಸಗಳೀಯೆರಡಕಿಂತಾಳವಿನ್ನೊಂದು ||ಭೃಶವಿಶ್ವಜೀವಿತಗಭೀರತೆಯ ದರ್ಶನದ |ರಸವದದ್ಭುತಮೌನ - ಮಂಕುತಿಮ್ಮ ||
ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ |ಲೋಕತಾಪದಿ ಬೆಂದು ತಣಿಪನೆಳಸಿದವಂ ||ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು |ಸ್ವೀಕರಿಕೆ ಬೇಳ್ವವರು - ಮಂಕುತಿಮ್ಮ ||
ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ |ಭೀಮಸಾಹಸವಿರಲಿ ಹಗೆತನವನುಳಿದು ||ನೇಮನಿಷ್ಠೆಗಳಿರಲಿ ಡಂಭಕಠಿಣತೆ ಬಿಟ್ಟು |ಸೌಮ್ಯವೆಲ್ಲೆಡೆಯಿರಲಿ - ಮಂಕುತಿಮ್ಮ ||
ಶಕ್ತಿ ಕರಣಕ್ಕಿರಲಿ; ರಸ ಸಂಗ್ರಹಣ ಶಕ್ತಿ |ಯುಕ್ತವದರೊಡನಿರಲಿ ಭೋಗದಿ ವಿರಕ್ತಿ ||ಶಕ್ತಿ ತನ್ನೊಳಗಿದ್ದು ರಕ್ತಮನನಾಗದನೆ |ಉತ್ತಮೋತ್ತಮ ಸುಕೃತಿ - ಮಂಕುತಿಮ್ಮ ||
ಶಕ್ತಿಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ |ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ ||ಚಿತ್ತವನು ತಿರುಗಿಸೊಳಗಡೆ; ನೋಡು; ನೋಡಲ್ಲಿ |ಸತ್ತ್ವದಚ್ಛಿನ್ನ ಝರಿ - ಮಂಕುತಿಮ್ಮ ||
ಶರಣುವೊಗು ಜೀವನರಹಸ್ಯದಲಿ ಸತ್ತ್ವದಲಿ |ಶರಣು ಜೀವನವ ಸುಮವೆನಿಪ ಯತ್ನದಲಿ ||ಶರಣಂತರಾತ್ಮಗಂಭೀರಪ್ರಶಾಂತಿಯಲಿ |ಶರಣು ವಿಶ್ವಾತ್ಮದಲಿ - ಮಂಕುತಿಮ್ಮ ||
ಶರಧಿಯೊಳಗಣ ವಸ್ತುಗಳನಲಚಿ ಜಾಲಿಸುವ |ತೆರೆಯಂತೆ ವಿಶ್ವಸತ್ತ್ವದ ಲಹರಿ ನಮ್ಮ ||ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ |ಭರಿಸುತಿರುವುದು ಬಾಳ - ಮಂಕುತಿಮ್ಮ ||
ಶರನಿಧಿಯನೀಜುವನು; ಸಮರದಲಿ ಕಾದುವನು |ಗುರಿಯೊಂದನುಳಿದು ಪೆರತೊಂದ ನೋಡುವನೆ? ||ಮರೆಯುವನು ತಾನೆಂಬುದನೆ ಮಹಾವೇಶದಲಿ |ನಿರಹಂತೆಯದು ಮೋಕ್ಷ - ಮಂಕುತಿಮ್ಮ ||
ಶಶ್ವದ್ವಿಕಾಸನ ಹ್ರಾಸನ ಕ್ರಮಗಳಿಂ |ವಿಶ್ವದಲಿ ನರ್ತಿಸುತೆ ಪೌರುಷೋನ್ನತಿಯೊಳ್ ||ಸ್ವಸ್ವರೂಪವನರಸುವಾಟ ಪರಚೇತನದ |ಹೃಷ್ಯದ್ವಿಲಾಸವೆಲೊ - ಮಂಕುತಿಮ್ಮ ||
ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ |ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ||ಚಲಿಸದೆನಿಸಿದ ಜಡವನಾವ ಗಾಳಿಯೊ ಸೋಕೆ |ಬಲ ತೀವಿ ಚಲಿಪುದದು - ಮಂಕುತಿಮ್ಮ ||
ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ |ಭುವನಜೀವನಜಲಧಿಯೂರ್ಮಿಕೋಟಿಯಲಿ ||ಛವಿಕೋಟಿಯೆರಚಲ್ ಪ್ರತಿಚ್ಛಾಯೆ ವಿಲಸಿಪುದು |ಸವಿ ನಮ್ಮದದರ ಕಣ - ಮಂಕುತಿಮ್ಮ ||
ಶಿಶುಗಳವಲಕ್ಕಿಬೆಲ್ಲದ ಸಂಭ್ರಮವ ನೋಡಿ |ಹಸಿವನೊಂದುವನೆ ಹಿರಿಯನು? ನಲಿಯದಿಹನೆ? ||ವಿಷಯಸಂಸಕ್ತಲೋಕವನ್ ಅನಾಸಕ್ತಿಯಿಂ- |ದೊಸೆದುನೋಳ್ಪನು ಜಾಣ - ಮಂಕುತಿಮ್ಮ ||
ಶೀತವಾತಗಳಾಗೆ ದೇಹಕೌಷಧ ಪಥ್ಯ |ಚೇತ ಕೆರಳಿರೆ ಕಣ್ಣುಕಿವಿಗಳಾತುರದಿಂ ||ಪ್ರೀತಿಯಿಂದದನೊಲಿಸಿ ನೀತಿಯಲಿ ಶಿಕ್ಷಿಸುವು- |ದಾತುಮದ ನೆಮ್ಮದಿಗೆ - ಮಂಕುತಿಮ್ಮ ||
ಶೀತಾಳೆ ಸಿಡುಬು ಶಿಶುಗಳ ಕುಲುಕಿ ತೆರಳುವುದು |ಪ್ರೀತಿ ಕಾಮನೆಗಳಷ್ಟಿಷ್ಟು ಬೆಳೆದವರ ||ಯಾತನೆಗಳಿಂ ಕುದಿಸಿ ಕುಲುಕಿ ಬಳಿಕಾರುವುವು |ಕಾತರತೆ ಕಳೆಯೆ ಸುಖ - ಮಂಕುತಿಮ್ಮ ||