ಒಟ್ಟು 950 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸುಂದರವನೆಸಗು ಜೀವನದ ಸಾಹಸದಿಂದೆ |ಕುಂದಿಲ್ಲವದಕೆ ಸಾಹಸಭಂಗದಿಂದೆ ||ಮುಂದಕದು ಸಾಗುವುದು ಮರಳಿ ಸಾಹಸದಿಂದೆ |ಚೆಂದ ಧೀರೋದ್ಯಮವೆ - ಮಂಕುತಿಮ್ಮ ||
ಸುಮ್ಮನಿರಲೊಲದೆ ತನಗೊಡನಾಡಿಯೊರ್ವಳನು |ನಿರ್ಮಿಸಿ ನಿಜಾಂಶದಿಂ ಮಾಯೆಯೆಂಬವಳಿಂ ||ದುಣ್ಮಿದ ಜಗಜ್ಜಾಲಗಳಲಿ ವಿಹರಿಸುತಿರುವ |ಬೊಮ್ಮನಾಟವ ಮೆರಸೊ - ಮಂಕುತಿಮ್ಮ ||
ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |ಹೊಮ್ಮುವೆನು ಕೋಟಿರೂಪದಲಿ ನಾನೆಂದು ||ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ |ನಮ್ಮಿರವು ಮಾಯೆಯಲಿ - ಮಂಕುತಿಮ್ಮ ||
ಸುರಪಸಭೆಯಲಿ ಗಾಧಿಸುತ ವಸಿಷ್ಠ ಸ್ಪರ್ಧೆ |ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ||ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ |ಕರುಮಗತಿ ಕೃತ್ರಿಮವೊ - ಮಂಕುತಿಮ್ಮ ||
ಸುಲಭವೇನಲ್ಲ ನರಲೋಕಹಿತನಿರ್ಧಾರ |ಬಲಕೆ ನೋಳ್ವರ್ ಕೆಲರು; ಕೆಲರೆಡಕೆ ನೋಳ್ವರ್ ||ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ |ನೆಲೆಗೊತ್ತು ಹಿತಕೆಲ್ಲಿ? - ಮಂಕುತಿಮ್ಮ ||
ಸುಳ್ಳಲ್ಲ ಕಥೆಯ ತಿರುಕನು ಕಂಡ ಸವಿಗನಸು |ಚೆಲ್ಲಿತಲ್ಲವೆ ಹಿಟ್ಟು ಘಟವನವನೊದೆಯೆ? ||ಜಳ್ಳು ಸುಖದುಃಖವಿರಬಹುದಾದೊಡದರ ಮೊನೆ |ಮುಳ್ಳಹುದು ಜೀವಕ್ಕೆ - ಮಂಕುತಿಮ್ಮ ||
ಸೃಷ್ಟಿಕಥೆ ಕಟ್ಟುಕಥೆ; ವಿಲಯಕಥೆ ಬರಿಯ ಕಥೆ |ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ||ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ |ಸತ್ಯ ಜಗದಲಿ ಕಾಣೊ - ಮಂಕುತಿಮ್ಮ ||
ಸೃಷ್ಟಿಚೋದನೆಗಳಿಂ ನರನೊಳಿಷ್ಟಗಳುದಯ- |ವಿಷ್ಟಸಿದ್ಧಿಗೆ ಯಂತ್ರತಂತ್ರಗಳ ಯುಕ್ತಿ ||ತ್ವಷ್ಟೃಕುಶಲದೆ ಸೃಷ್ಟಿವಿಕೃತಿ; ಇಂತನ್ಯೋನ್ಯ- |ಸ್ಪೃಷ್ಟರ್ ಪ್ರಕೃತಿ ನರರು - ಮಂಕುತಿಮ್ಮ ||
ಸೃಷ್ಟಿಯ ವಿಧಾನದಲಿ ಸೊಟ್ಟುಗಳು ನೂರಿಹುವು |ನೆಟ್ಟಗಿಪೆನ್ ಅವನ್ ಎಂದು ನರರ ಚಿರದೀಕ್ಷೆ ||ಇಷ್ಟಗಳನನ್ಯೋನ್ಯವವರೇಕೆ ಬಗೆದಿರರು? |ನಿಷ್ಠುರಪ್ರಿಯರವರು - ಮಂಕುತಿಮ್ಮ ||
ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು ನ- |ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ||ಇಷ್ಟವಾತನೊಳುದಿಸುವಂತೆ; ಚೋದಿಪುದೆಂತು? |ಕಷ್ಟ ನಮಗಿಹುದಷ್ಟೆ - ಮಂಕುತಿಮ್ಮ ||
ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |ಇಷ್ಟ ಮೋಹಕ ದಿವ್ಯಗುಣಗಳೊಂದು ಕಡೆ ||ಕಷ್ಟ ಬೀಭತ್ಸ ಘೋರಂಗಳಿನ್ನೊಂದು ಕಡೆ |ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ ||
ಸೃಷ್ಟಿರೂಪಂಗಳವತಾರದೊಳ್ ಕ್ರಮ ಲಕ್ಷ್ಯ |ಪುಷ್ಟವಾಗಿರ್ದೊಡೇನಿಲ್ಲದೊಡದೇನು? ||ಶಿಷ್ಟಮಾದುದು ಸತ್ತ್ವವದನು ಸೋಕದು ರೂಪ |ದೃಷ್ಟಿ ಸತ್ತ್ವದೊಳಿರಲಿ - ಮಂಕುತಿಮ್ಮ ||
ಸೆರೆಬಿದ್ದು ಧರ್ಮಪಾದಪ ನಿಲದು ಮತಗಳಲಿ |ಜರೆಯಿಂದ ಬರಡಹುದು ಮಠದ ನೆರಳಿನಲಿ ||ಪರಸತ್ತ್ವರಸ ವಿಶ್ವಜೀವನದ ಬೇರ್ಗಳಿಂ |ನೆರೆಯಲಾ ತರು ಸೊಂಪು - ಮಂಕುತಿಮ್ಮ ||
ಸೆಳೆಯುತಿರುವುದದೊಂದು ಹೊರಬೆಡಗಿನೆಳೆಗಳೆ |ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ||ಎಳೆದಾಟವೇಂ ಋಣಾಕರ್ಷಣೆಯೊ? ಸೃಷ್ಟಿವಿಧಿ |ಯೊಳತಂತ್ರವೋ? ನೋಡು - ಮಂಕುತಿಮ್ಮ ||
ಸೇರಿರ್ಪುವುಸಿರುಸಿರುಗಳೂಳೆಷ್ಟೊ ಜೀವಾಣು |ಹಾರುತಿಹುವೆಷ್ಟೊ ಚೇತನ ಧೂಳುಕಣದೊಳ್ ||ಪ್ರಾರಬ್ಧಗತಿಯ ನಿಶ್ಚಯದಿ ತಿಳಿವವರಿಲ್ಲ |ಆ ರಹಸ್ಯಕ್ಕೆರಗೊ! - ಮಂಕುತಿಮ್ಮ ||