ಒಟ್ಟು 950 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸೈನಿಕನು ನೀನು; ಸೇನಾಧಿಪತಿಯೆಲ್ಲಿಹನೊ! |ಆಣತಿಯ ಕಳುಹುತಿಹನದನು ನೀನರಿತು ||ಜಾಣಿನಧಟಿಂ ಪೋರು; ಸೋಲುಗೆಲವವನೆಣಿಕೆ |ಕಾಣಿಸದನಾಳ್ಕೆಯದು - ಮಂಕುತಿಮ್ಮ ||
ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ? |ಮಗುವೆ; ಮುದುಕನೆ; ಪುರಾಣಿಕ ಪುರೋಹಿತರೆ? ||ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು |ಮೊಗವ ತಿದ್ದುವರೆಲ್ಲ - ಮಂಕುತಿಮ್ಮ ||
ಸೊಟ್ಟುಗಳ ನೆಟ್ಟಗಾಗಿಪ ಯತ್ನ ಲೋಕದಲಿ |ಸೃಷ್ಟಿಯಾದಿಯಿನಾಗುತಿಹುದು; ಫಲವೇನು? ||ಹೊಟ್ಟೆ ನೋವಿಳಿಯುತಿರೆ ರಟ್ಟೆ ನೋವೆನ್ನುವುದು |ಮಟ್ಟಸವೆ ತಿರೆಹರವು? - ಮಂಕುತಿಮ್ಮ ||
ಸೌಂದರ್ಯ ಬಾಂಧವ್ಯಗಳನು ಬರಿದೆನಲಹುದೆ? |ಹೊಂದಿಸವೆ ಕುಂದಿಸವೆ ಜೀವಿಗಳನವುಗಳ್? ||ಸಿಂಧುಪೂರದಿ ಬಿದ್ದವರೊಳೊಬ್ಬರೊಬ್ಬರನು |ಅಂದಿಕೊಳಲದು ಬರಿದೆ? - ಮಂಕುತಿಮ್ಮ ||
ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ |ಕುಂದುವಡೆಯದ ಸತ್ಯವಿಳೆಯೊಳಿನ್ನೆಲ್ಲಿ? ||ಗಂಧಾನಿಲಂಗಳವು ಪರಸತ್ತ್ವಪುಷ್ಪದವು |ಸಂದೇಹವೇನೆಲವೊ - ಮಂಕುತಿಮ್ಮ ||
ಸೌಂದರ್ಯದಾಲಯ ಬರಿ ದ್ವಂದ್ವವೇನಲ್ಲ |ದ್ವಂದ್ವದೊಳಗನುವು; ಅದು ಪರಿಮಾಣದುಚಿತ ||ಸಂಧಾನರೀತಿಯದು; ಸಹಕಾರ ನೀತಿಯದು |ಸಂದರ್ಭಸಹಜತೆಯೊ - ಮಂಕುತಿಮ್ಮ ||
ಸೌಂದರ್ಯದೊಳ್ ದ್ವಂದ್ವ; ಬಾಂಧವ್ಯದೊಳ್ ದ್ವಂದ್ವ |ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ ||ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ |ಬಂಧಮೋಚನ ನಿನಗೆ - ಮಂಕುತಿಮ್ಮ ||
ಸೌಂದರ್ಯವೊಂದು ದೈವರಹಸ್ಯ; ಸೃಷ್ಟಿವೊಲು |ನಿಂದಿರ್ಪುದದರಾಶೆಯಿನೆ ಜೀವಿತಾಶೆ ||ಅಂದುವುದು ಕಣ್ಣಿಗದು ಸಂಸ್ಕೃತಿಗೆ ತಕ್ಕಂತೆ |ಚೆಂದದರಿವೆ ತಪಸ್ಸೊ - ಮಂಕುತಿಮ್ಮ ||
ಸ್ಥಾಪಿತವೆ ಜೀವ ನಿನ್ನೊಡಲಿನೊಂದಂಗದಲಿ? |ಆಪಾದಶಿರವುಮದು ತುಂಬಿರುವುದಲ್ತೆ? ||ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿ |ಲೇಪಗೊಳ್ಳದ ಸತ್ತ್ವ - ಮಂಕುತಿಮ್ಮ ||
ಸ್ಥಿರ ಹಿಮಾಚಲ ಬೊಮ್ಮ; ಚರ ಜಾಹ್ನವಿಯೆ ಮಾಯೆ |ಪರಸತ್ತ್ವಘನದ ವಿದ್ರವರೂಪ ವಿಶ್ವ ||ಪರಮಾರ್ಥಕೊಂದಕ್ಷಿ ವೆವಹಾರಕಿನ್ನೊಂದು |ಎರಡುಮೊಂದಾಂತರ್ಯ - ಮಂಕುತಿಮ್ಮ ||
ಸ್ಥೂಲ ಸೂಕ್ಷ್ಮವಿವೇಕರಹಿತೇಷ್ಟ ಬಂಧುಜನ |ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ||ಸಾಲವನು ನಿನ್ನಿಂದ ಸಲಿಸಿಕೊಳಬಂದವರು |ತಾಳುಮೆಯಿನವರೊಳಿರು - ಮಂಕುತಿಮ್ಮ ||
ಸ್ಮಿತವಿರಲಿ ವದನದಲಿ; ಕಿವಿಗೆ ಕೇಳಿಸದಿರಲಿ |ಹಿತವಿರಲಿ ವಚನದಲಿ; ಋತವ ಬಿಡದಿರಲಿ ||ಮಿತವಿರಲಿ ಮನಸಿನುದ್ವೇಗದಲಿ; ಭೋಗದಲಿ |ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ||
ಸ್ರವಿಸುವುದು ಜೀವರಸ ಹೃದಯಗರ್ತದ ತಳದಿ |ಕಿವಿಗಾ ರಹಸ್ಯದುಲಿ ಕಾವ್ಯಗಾನಗಳಿಂ ||ಭುವನದಾಚಿನ ರಹಸ್ಯದ ಕೀರ್ತಿ ವೇದಗಳ |ರವದಿನೆಂದಾರ್ಷಮತ - ಮಂಕುತಿಮ್ಮ ||
ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ |ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ||ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? |ಕ್ಲಿಷ್ಟದ ಸಮಸ್ಯೆಯದು - ಮಂಕುತಿಮ್ಮ ||
ಸ್ವಪ್ನಲೋಕವ ಜಾಗೃತಂ ಸುಳ್ಳೆನುದನಲ್ತೆ? |ಸುಪ್ತಂಗೆ ಜಾಗೃತನ ಲೋಕಮುಂ ಸುಳ್ಳೇ ||ಸ್ವಪ್ನ ಜಾಗ್ರತ್ಸುಪ್ತಿಗಳ ಹಿಂದೆ ನಿರ್ಲಿಪ್ತ- |ಗುಪ್ತಾತ್ಮನಿಹುದು ದಿಟ - ಮಂಕುತಿಮ್ಮ ||