ಒಟ್ಟು 156 ಕಡೆಗಳಲ್ಲಿ , 1 ವಚನಕಾರರು , 135 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು |ಗುರುತಿಸೊಳಿತಿರುವುದನು ಕೇಡುಗಳ ನಡುವೆ ||ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು |ಹರುಷಕದೆ ದಾರಿಯೆಲೊ - ಮಂಕುತಿಮ್ಮ ||
ಬರೆವ ಹಲಗೆಯನೊಡೆದು ಬಾಲಕನು ತಾನದನು |ಮರಳಿ ಜೋಡಿಪೆನೆನ್ನುತಾಯಾಸಗೊಳುತ ||ಸರಿಚೌಕಗೈವಾಟದಲಿ ಜಗವ ಮರೆವಂತೆ |ಪರಬೊಮ್ಮ ಸೃಷ್ಟಿಯಲಿ - ಮಂಕುತಿಮ್ಮ ||
ಬಾಂದಳದ ಬಾಗು; ರವಿಕಿರಣಗಳ ನೀಳ್ಕೋಲು |ಇಂದುಮಣಿನುಣ್ಪು; ತಾರೆಗಳ ಕಣ್ಮಿನುಗು ||ಚೆಂದದಂಗಾಂಗಭಾವದಿ ಮೊದಲ ಪಾಠವಿವು |ಸೌಂದರ್ಯಗುರು ಪ್ರಕೃತಿ - ಮಂಕುತಿಮ್ಮ ||
ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳೆಗೆ |ನಾನೆನುವ ಚೇತನದಿ ರೂಪಗೊಂಡಿಹುದೋ? ||ನಾನೆನುವ ಕೇಂದ್ರದಿನೆ ಹೊರಟ ಸತ್ತ್ವದ ಪರಿಧಿ |ಬಾನಾಚೆ ಹಬ್ಬಿಹುದೊ? - ಮಂಕುತಿಮ್ಮ ||
ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ? |ಮೀನು ನೀರೊಳು ನುಸುಳೆ ಪಥನಿಯಮವಿಹುದೆ? ||ಏನೊ ಜೀವವನೆಳೆವುದೇನೊ ನೂಕುವುದದನು |ನೀನೊಂದು ಗಾಳಿಪಟ - ಮಂಕುತಿಮ್ಮ ||
ಬಾಳ ಸಿರಿ ಸೊಗಸುಗಳ ಪೆರ್ಚಿಪನು ಖೇಲಕನು |ಕೀಳದೆನಿಪವನೊರಟ; ಮಂಕ; ಕಲ್ಲೆದೆಗ ||ತೋಳಿಂದೆ ತಿಳಿವಿಂದೆ ನುಡಿಯಿಂದೆ ಜಗದಿರವ |ಮೇಲೆನಿಪವನೆ ರಸಿಕ - ಮಂಕುತಿಮ್ಮ ||
ಬಾಳ ಹಳಿವುದದೇಕೆ? ಗೋಳ ಕರೆವುದದೇಕೆ? |ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ||ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ |ಪಾಲುಗೊಳಲಳಬೇಡ - ಮಂಕುತಿಮ್ಮ ||
ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆ |ಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆ ||ಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆ |ಮೇಲೇನು? ಬೀಳೇನು? - ಮಂಕುತಿಮ್ಮ ||
ಬಾಳು ಪಾಳೆನ್ನುವರ ಬಿಟ್ಟಿಹುದೆ ಬೆದಕಾಟ? |ತಾಳಿದರೆ ಬಾಳನಂತಹರುಮ್ ಆಶೆಯಲಿ? ||ಕಾಲವಿನ್ನಿರದಿಂತು ನಾಳೆ ನೋಡುವಮೆನುತ |ಮೇಲನೆ ನಿರೀಕ್ಷಿಪರು - ಮಂಕುತಿಮ್ಮ ||
ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು |ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ||ಗೋಳ್ಕರೆದರೇನು ಫಲ ಗುದ್ದಾಡಲೇನು ಫಲ |ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ ||
ಬೀಳಿಸದಿರೆಲೊ ನಿನ್ನ ನೆರಳನಿತರರ ಮೇಲೆ |ಬಾಳಿಕೊಳುಗವರು ತಂತಮ್ಮ ಬೆಳಕಿನಲಿ ||ಮೇಲುಬೀಳುಗಳಾರ್ಗದೆಂತೊ ನೀನೇನರಿವೆ? |ತಾಳದಿರು ಗುರುತನವ - ಮಂಕುತಿಮ್ಮ ||
ಬೀಳುವುದ ನಿಲ್ಲಿಪುದು; ಬಿದ್ದುದನು ಕಟ್ಟುವುದು |ಹಾಲೊಡೆಯೆ ಕಡೆದದನು ತಕ್ರವಾಗಿಪುದು ||ಹಾಳ ಹಾಳಾಗಿಪುದು; ಹಳದ ಹೊಸತಾಗಿಪುದು |ಬಾಳಿಗಿದೆ ಚಿರಧರ್ಮ - ಮಂಕುತಿಮ್ಮ ||
ಬೇರಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ |ತೋರಿಪೂಸರವಳ್ಳಿಯಂತೇನು ಬೊಮ್ಮಂ? ||ಪೂರ ಮೈದೋರೆನೆಂಬಾ ಕಪಟಿಯಂಶಾವ |ತಾರದಿಂದಾರ್ಗೇನು? - ಮಂಕುತಿಮ್ಮ ||
ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ |ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ||ಬಾವಿಗೂಟೆಯನಿತ್ತು ನರರೊಡಲ ಸೇರುವುದು |ದೈವ ರಸತಂತ್ರವಿದು - ಮಂಕುತಿಮ್ಮ ||
ಭ್ರಾಂತಿಯೋ ಸಂಪೂರ್ಣಸುಖದಾಶೆ ಬಾಹ್ಯದಲಿ |ಸಾಂತ ಲೋಕದ ಸೌಖ್ಯ; ಖಂಡಖಂಡವದು ||ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸಿರ್ದೊಡೇ- |ಕಾಂತ ಪೂರ್ಣಾನಂದ - ಮಂಕುತಿಮ್ಮ ||