ಒಟ್ಟು 946 ಕಡೆಗಳಲ್ಲಿ , 1 ವಚನಕಾರರು , 945 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು |ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು ||ಹಿಟ್ಟಿಗಗಲಿದ ಬಾಯಿ; ಬಟ್ಟೆಗೊಡ್ಡಿದ ಕೈಯಿ |ಇಷ್ಟೆ ನಮ್ಮೆಲ್ಲ ಕಥೆ - ಮಂಕುತಿಮ್ಮ ||
ಹೊತ್ತು ಕಣಕಣದಿ ಮಣ್ಣನು ಗೆದ್ದಲಿರುವೆಗಳು |ಮೆತ್ತುತೆಡೆಬಿಡದೆ ದುಡಿದಾಗಿಸಿದ ಗೂಡು ||ಹುತ್ತವಾಗುವುದು ವಿಷಸರ್ಪಕ್ಕೆ; ಮಾನವನ |ಯತ್ನಗಳ ಕಥೆಯಿಷ್ಟೆ - ಮಂಕುತಿಮ್ಮ ||
ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ |ಮಣ್ಣೆನುವನ್; ಅವನ ವರ ಮಣ್ಣೆನುವೆ ನೀನು ||ಭಿನ್ನಮಿಂತಿರೆ ವಸ್ತುಮೌಲ್ಯಗಳ ಗಣನೆಯೀ |ಪಣ್ಯಕ್ಕೆ ಗತಿಯೆಂತೊ? - ಮಂಕುತಿಮ್ಮ ||
ಹೊರಗಾವುದೊಳಗಾವುದೀ ಸೃಷ್ಟಿಚಕ್ರದಲಿ |ಎರಡನೊಂದಾಗಿಪುದು ಹರಿವ ನಮ್ಮುಸಿರು ||ಇರುವುದುಳಿದಿನಿತು ಹೊರಗಾಳಿ ಯೋಗಿಗಳೊಳಂ |ಬರಿ ಸುಷಿರಪಿಂಡ ಜಗ - ಮಂಕುತಿಮ್ಮ ||
ಹೊರಗು ಹೊರೆಯಾಗದವೊಲ್ ಒಳಗನನುಗೊಳಿಸಿ; ನೀ- |ನೊಳಗು ಶೆಕೆಯಾಗದವೊಲ್ ಅಳವಡಿಸೆ ಹೊರಗ ||ಸರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ |ಪರಮಜೀವನಯೋಗ - ಮಂಕುತಿಮ್ಮ ||
ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ |ಹೊರಗೆ ಕಾರ್ಯಧ್ಯಾನವೊಳಗುದಾಸೀನ ||ಹೊರಗೆ ಸಂಸೃತಿಭಾರವೊಳಗದರ ತಾತ್ಸಾರ |ವರಯೋಗಮಾರ್ಗವಿದು - ಮಂಕುತಿಮ್ಮ ||
ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- |ಳುರಿಯನೆಬ್ಬಿಸಿ ಹೊಗೆಯನೆರಚಿ ಕಣ್ಗಳಿಗೆ ||ಕೆರಳಿಪುದು ಕರಣಗಳ; ಮರಳಿಪುದು ಹರಣಗಳ |ಹೊರಮೋಹವೊಳದಾಹ - ಮಂಕುತಿಮ್ಮ ||
ಹೊರಗೆ; ವಿಶ್ವದಿನಾಚೆ; ದೂರದಲಿ; ನೀಲದಲಿ |ಒಳಗೆ; ಹೃತ್ಕೂಪದಾಳದಲಿ; ಮಸಕಿನಲಿ ||ನೆಲೆಗಳಿಂತೆರಡು ಮೂಲ ರಹಸ್ಯಕವುಗಳುಲಿ |ಕಲೆತಂದು ನೀಂ ಜ್ಞಾನಿ - ಮಂಕುತಿಮ್ಮ ||
ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು |ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ||ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |ಜಸವು ಜನಜೀವನಕೆ - ಮಂಕುತಿಮ್ಮ ||
ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು |ರಸವು ನವನವತೆಯಿಂದನುದಿನವು ಹೊಮ್ಮಿ ||ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ |ಪಸರುತಿರೆ ಬಾಳ್ ಚೆಲುವು - ಮಂಕುತಿಮ್ಮ ||
ಹೊಸಹೊಸದು ತಾನಾಗುತಿರ್ದೊಡಂ ತನ್ನಯ |ಪ್ರಸವ ಪ್ರವಾಹ ಭೂಮಿಗಳ ಹಳೆತನದಿಂ ||ನಸುಸೋಂಕು ವಾಸನೆಯ ಪೊನಲೊಂದಬೇಕಲ್ತೆ? |ಹೊಸದು ಹಳದಾಗದೇ - ಮಂಕುತಿಮ್ಮ ||
ಹೊಸಹೊಸಬನಾಗುವನನುಕ್ಷಣಂ ಮಾನವನು |ವಸುಧೆಯಾ ಮೂಸೆಯಲಿ ಪುಟಪಾಕವಾಂತು ||ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೆ |ಕಸವೆಲ್ಲ ಕಳೆದವನು - ಮಂಕುತಿಮ್ಮ ||
ಹೊಳಪು ಹೊಳಪಿನ ನಡುವೆ ಬಿಡುವಿನಿತು ರತ್ನದಲಿ |ಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳು ||ಬೆಳಸು ಬೆಳಸಿನ ಸಾಲು ನಡುವೆ ಬದಿ ಗದ್ದೆಯಲಿ |ಉಳಿವಿಗಳಿವಿನ ನೆರೆಯೊ - ಮಂಕುತಿಮ್ಮ ||
ಹೋರಾಡು ಬೀಳ್ವನ್ನಮೊಬ್ಬೊಂಟಿಯಾದೊಡಂ |ಧೀರಪಥವನೆ ಬೆದಕು ಸಕಲಸಮಯದೊಳಂ ||ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? |ಹೋರಿ ಸತ್ತ್ವವ ಮೆರಸು - ಮಂಕುತಿಮ್ಮ ||
ಹೋರು ಧೀರತೆಯಿಂದ; ಮೊಂಡುತನದಿಂ ಬೇಡ |ವೈರ ಹಗೆತನ ಬೇಡ; ಹಿರಿ ನಿಯಮವಿರಲಿ ||ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |ಹೋರುದಾತ್ತತೆಯಿಂದ - ಮಂಕುತಿಮ್ಮ ||