ಒಟ್ಟು 156 ಕಡೆಗಳಲ್ಲಿ , 1 ವಚನಕಾರರು , 135 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮತಿಗರ್ಥವಾದೊಡೇಂ? ಸ್ಮೃತಿಯೊಳದು ನೆಲಸಿರಲಿ |ಸತತ ಸಂಧಾನದಲಿ ಪರಮಾರ್ಥವಿರಲಿ ||ಶತಲಕ್ಷಧನದ ಲೆಕ್ಕವ ಬಾಯಿ ನುಡಿದೊಡೇಂ? |ಭೃತಿಯೆಷ್ಟು ವೆಚ್ಚಕ್ಕೆ? - ಮಂಕುತಿಮ್ಮ ||
ಮಂದಿರದ ಶಿಲ್ಪಿ ಯಂತ್ರಗಳ ಯೋಜಕ ರಾಜ್ಯ- |ಸಂಧಾನಿ ವಿಜ್ಞಾನಿಯುದ್ಯೋಗದಾನಿ ||ಮಂದಿಮುಂದಾಳು ಜನಬಾಂಧವ್ಯಪೋಷಕನು |ಸೌಂದರ್ಯಕರರಿವರು - ಮಂಕುತಿಮ್ಮ ||
ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ |ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ ||ಮನುಜರ ಪರಸ್ಪರೋದ್ರೇಕ ಜಗದ ವಿಲಾಸ |ಮನವೆ ಪರಮಾದ್ಭುತವೊ - ಮಂಕುತಿಮ್ಮ ||
ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ |ಹೊನಲು ನೂರೀ ಬಾಳ ಕಡಲನುಬ್ಬಿಸಲಿ ||ತನುಬಂಧ ಕಳಚಿ; ಜೀವವಖಂಡಚೇತನದ |ಕುಣಿತದಲಿ ಕೂಡಿರಲಿ - ಮಂಕುತಿಮ್ಮ ||
ಮನೆಯ ಮಾಳಿಗೆಗಲ್ಲ; ಮುಡಿಯ ಕೊಪ್ಪಿಗೆಗಲ್ಲ |ಇನಿವಣ್ಣು ತನಿಯ ಕಾಳೆಂಬುದೇನಿಲ್ಲ ||ಬಣಗು ಕುರಿಚಲು ಗಿಡದ ಬಾಳೇನು? ನೀನಂತು |ಒಣಗಿದೊಡೆ ಸವುದೆ ಸರಿ - ಮಂಕುತಿಮ್ಮ ||
ಮರಣದಿಂ ಮುಂದೇನು? ಪ್ರೇತವೋ? ಭೂತವೋ? |ಪರಲೋಕವೋ? ಪುನರ್ಜನ್ಮವೊ? ಅದೇನೋ! ||ತಿರುಗಿ ಬಂದವರಿಲ್ಲ; ವರದಿ ತಂದವರಿಲ್ಲ |ಧರೆಯ ಬಾಳ್ಗದರಿನೇಂ? - ಮಂಕುತಿಮ್ಮ ||
ಮಲಗಿದೋದುಗನ ಕೈಹೊತ್ತಗೆಯು ನಿದ್ದೆಯಲಿ |ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ||ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು |ಸಡಿಲುವುವು ಬಾಳ್ ಮಾಗೆ - ಮಂಕುತಿಮ್ಮ ||
ಮಾನವರೊ ದಾನವರೊ ಭೂಮಾತೆಯನು ತಣಿಸೆ |ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ||ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ |ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ ||
ಮಾನಸವ ಚಿಂತೆವಿಡಿದಂದೊರ್ವನೆರಡಾಗಿ |ತಾನದಾರೊಳೊ ವಾದಿಸುವನಂತೆ ಬಾಯಿಂ ||ದೇನನೋ ನುಡಿಯುತ್ತ ಕೈಸನ್ನೆಗೈಯುವನು |ಭಾನವೊಂದರೊಳೆರಡು - ಮಂಕುತಿಮ್ಮ ||
ಮುದಿಕುರುಡಿ ಹೊಂಗೆಯನು ``ಬಾದಾಮಿ; ಕೋ'ಯೆನುತ |ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? ||ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣಿಹುದೆ? |ಸುಧೆ ಬಂತೆ ಸುಲಭದಲಿ? - ಮಂಕುತಿಮ್ಮ ||
ಮೂಲವಸ್ತುವದೊಂದು ಲೀಲೆಗೋಸುಗ ನೂರು |ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ||ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯದ ತಾಳಿ |ಆಳುತಿರು ಜೀವನವ - ಮಂಕುತಿಮ್ಮ ||
ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ |ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? |ಸತ್ರ ಹೊಸದಿಹುದು ನಡೆ - ಮಂಕುತಿಮ್ಮ ||
ರಣದಿ ಬಿದ್ದಾ ಸೈನ್ಯಪತಿ ಸಿಡ್ನಿಯುತ್ಕ್ರಮಣ- |ದೊಣಗುಬಾಯಿಗೆ ನೀರನೊಡ್ಡಲ್ ಅದನವನು ||ತನಗಿಂತ ಕೆಲದ ಭಟಗದು ಸಲ್ವುದೆಂದಿತ್ತು |ತಣಿವನಾಂತುದ ನೆನೆಯೊ - ಮಂಕುತಿಮ್ಮ ||
ರವಿ ನಿಲದೆ ಸುತ್ತುತಿರೆ ಕೊರಗು ಕಳವಳವೇಕೊ? |ಸವೆಯಿಸುತಲೆಲ್ಲವನು ಕಡೆಗೊಯ್ವನವನು ||ಕವಳಿಸುವುದೆಲ್ಲವನು ಮರೆವು; ಬಾಳೊಳ್ ಅದೊಂದು |ಶಿವಕೃಪೆಯ ಲಕ್ಷಣವೊ - ಮಂಕುತಿಮ್ಮ ||
ರಾಗಿಮುದ್ದೆಯ ನುಂಗಿ ನಲಿದು ಬಾಳ್ವಾತಂಗೆ |ಕಾಗೆ ಕದ್ದುಣುವ ಭಕ್ಷ್ಯವ ಕಂಡು ಕರುಬೆ? ||ನೀಗುವುದು ಹಸಿವನ್ ಉಣಿಸೆಂತಪ್ಪುದಾದೊಡಂ |ಬಾಗಿಸದಿರಾತ್ಮವನು - ಮಂಕುತಿಮ್ಮ ||