ಒಟ್ಟು 4119 ಕಡೆಗಳಲ್ಲಿ , 1 ವಚನಕಾರರು , 937 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಉದರದೈವಕೆ ಜಗದೊಳೆದುರು ದೈವವದೆಲ್ಲಿ? |ಮೊದಲದರ ಪೂಜೆ; ಮಿಕ್ಕೆಲ್ಲದವರಿಂದ ||ಮದಿಸುವುದದಾದರಿಸೆ; ಕುದಿವುದು ನಿರಾಕರಿಸೆ |ಹದದೊಳಿರಿಸುವುದೆಂತೊ? - ಮಂಕುತಿಮ್ಮ ||
ಉದರಶಿಖಿಯೊಂದುಕಡೆ; ಹೃದಯಶಿಖಿಯೊಂದುಕಡೆ |ಕುದಿಸದಿರೆ ಜೀವಶಿಲೆ ಮೃದುವಪ್ಪುದೆಂತು? ||ಬದುಕಿನುರಿಯಲಿ ಕರಗಿ ತಿಳಿಯಾಗದಿಹ ಜೀವ |ಪುದಿಯದಾತ್ಮಾರ್ಣವದಿ - ಮಂಕುತಿಮ್ಮ ||
ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು |ಮೆರುಗನೊಂದುವುದು ಪೊನ್ ಪುಟ ಕಾದ ಬಳಿಕ ||ನರಜೀವವಂತು ಶುಚಿಯಹುದು ದುಃಖಾಶ್ರುವಿಂ |ತರುವಾಯ ಪುನರುದಯ - ಮಂಕುತಿಮ್ಮ ||
ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? |ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ||ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? |ಕರುಬಿದನ ಹರಿ ಪೊರೆಗೆ - ಮಂಕುತಿಮ್ಮ ||
ಉಸಿರವೊಲನುಕ್ಷಣಂ ಪುರುಷನೊಳವೊಗುತವನ |ಪೊಸಬನಂಗೆಯ್ದು ದೈವಿಕಸತ್ತ್ವಮವನುಂ ||ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ |ಬೆಸಸುತಿಹುದೇಗಳುಂ - ಮಂಕುತಿಮ್ಮ ||
ಋಣದ ಜಾಲವನಂತ; ಕರುಮಚಕ್ರವನಂತ |ಜನುಮಜನುಮದ ಕಥೆಯ ತಂತುಗಳನಂತ ||ಅನವರತ ನೂತನವಿದೆನಿಪ ವಿಶ್ವದ ತಂತ್ರ |ಬಿನದ ಪರಬೊಮ್ಮಂಗೆ - ಮಂಕುತಿಮ್ಮ ||
ಋಣದ ಮೂಟೆಯ ಹೊರಿಸಿ; ಪೂರ್ವಾರ್ಜಿತದ ಹುರಿಯ |ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು ||ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆ |ಕುಣಿವ ಗರ್ದಭ ನೀನು - ಮಂಕುತಿಮ್ಮ ||
ಋಣವ ತೀರಿಸಬೇಕು; ಋಣವ ತೀರಿಸಬೇಕು |ಋಣವ ತೀರಿಸುತ ಜಗದಾದಿಸತ್ತ್ವವನು ||ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು |ಮನೆಯೊಳಗೆ ಮಠ ನಿನಗೆ - ಮಂಕುತಿಮ್ಮ ||
ಋತುಚಕ್ರ ತಿರುಗುವುದು; ಕಾಲನೆದೆ ಮರುಗುವುದು |ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ||ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ |ಸತತ ಕೃಷಿಯೋ ಪ್ರಕೃತಿ - ಮಂಕುತಿಮ್ಮ ||
ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ |ದುಡಿ ಕೈಯಿನಾದನಿತು; ಪಡು ಬಂದ ಪಾಡು ||ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು |ಬಿಡುಗಡೆಗೆ ದಾರಿಯದು - ಮಂಕುತಿಮ್ಮ ||
ಎಡವದೆಯೆ; ಮೈಗಾಯವಡೆಯದೆಯೆ; ಮಗುವಾರು |ನಡೆಯ ಕಲಿತವನು? ಮತಿನೀತಿಗತಿಯಂತು ||ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- |ದಡವಿಕೊಳುವವರೆಲ್ಲ - ಮಂಕುತಿಮ್ಮ ||
ಎಣಿಕೆಯೊಳಿತಾದೊಡೆಯುಮೊಳಿತನಾಗಿಸದು ಹಟ |ಮಣಿಕನಕ ಸಂಕೋಲೆ ತನುವ ಬಂಧಿಸದೇಂ? ||ತನಯನಿರಿದಸಿ ನಿನ್ನ ಮೈಯ ಹುಣ್ಣಾಗಿಸದೆ? |ಮನ ಸರ್ವಸಮವಿರಲಿ - ಮಂಕುತಿಮ್ಮ ||
ಎತ್ತಣಿನೊ ದೃಕ್ಪರಿಧಿಯಾಚೆಯಿಂದಲನಂತ |ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ||ಬಿತ್ತರಿಸುತಿಹುದು ಹೊಸಹೊಸತನವನೆಡೆಬಿಡದೆ |ನಿತ್ಯನಿತ್ಯವು ಜಗದಿ - ಮಂಕುತಿಮ್ಮ ||
ಎತ್ತಲೋ ಕಾಡುಮಬ್ಬಿನ ಬಳ್ಳಿ ಮೊಗ್ಗಿನಲಿ |ಚಿತ್ರರಚನೆಗದೇಕೆ ತೊಡಗುವಳ್ ಪ್ರಕೃತಿ? ||ಕೃತ್ಯಕ್ಕೆ ತಾಂ ತರುವ ಶಕ್ತಿಗುಣಪೂರ್ಣತೆಯೆ |ಸಾರ್ಥಕವೊ ಜೀವಿತಕೆ - ಮಂಕುತಿಮ್ಮ ||
ಎತ್ತೆತ್ತ ನೋಡಲುಂ ಗುಪ್ತಭೂತಗಳಯ್ಯ! |ಕತ್ತಲೆಯೊಳಾಡುತಿಹ ದೆವ್ವಗಳ ಸುಳಿವು ||ಮುತ್ತಿ ಮುಸುಕಿಹುದು ಜೀವವ ರಹಸ್ಯವದೊಂದು |ಬೆತ್ತಲೆಯದಹುದೆಂತು? - ಮಂಕುತಿಮ್ಮ ||