ಒಟ್ಟು 156 ಕಡೆಗಳಲ್ಲಿ , 1 ವಚನಕಾರರು , 135 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ರಾಮನುಂ ಭರತನುಂ ತಬ್ಬಿಕೊಂಡತ್ತಂದು |ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿದಂದು ||ಸೀಮೆಯಂ ಮುಟ್ಟಿತಲ ಬಾಂಧವ್ಯಸೌಂದರ್ಯ |ಕ್ಷೇಮವದು ಜೀವಕ್ಕೆ - ಮಂಕುತಿಮ್ಮ ||
ಲೀಲೆಯೇಂ ಬಾಳೆಲ್ಲ? ಛೀ ತಳ್ಳು ಹಾಸ್ಯವನು |ಬಾಲರೇಂ ನಾವಿನ್ನುಮೆನುತ ಪಲ್ಕಡಿದು ||ಖೇಲನವ ಬೇಡವೆನುವರನು ವಿಧಿರಾಯನವ--- |ಹೇಳಿಪನು ಸೆರೆವಿಡಿದು - ಮಂಕುತಿಮ್ಮ ||
ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು |ವಿಷದೂಟಕಿಂತುಪೋಷಿತವೆ ಲೇಸಲ್ತೆ? ||ತೃಷೆ ಕನಲೆ; ಜೀವ ಬಿಸಿಬಾಣಲಿಗೆ ಬಿದ್ದ ಹುಳು |ಶಿಶು ಪಿಶಾಚಿಯ ಕೈಗೆ - ಮಂಕುತಿಮ್ಮ ||
ವಿಸ್ತಾರದಲಿ ಬಾಳು; ವೈಶಾಲ್ಯದಿಂ ಬಾಳು |ಕತ್ತಲೆಯ ಮೊಡಕು ಮೂಲೆಗಳ ಸೇರದಿರು ||ಭಾಸ್ಕರನನುಗ್ರಹವೆ ನೂತ್ನ ಜೀವನಸತ್ತ್ವ |ಮೃತ್ಯು ನಿನಗಲ್ಪತೆಯೊ - ಮಂಕುತಿಮ್ಮ ||
ವ್ಯಕ್ತಿಮಾತ್ರದ ವಿಭವ ವಿಶ್ವಾತ್ಮತಾನುಭವ |ಮುಕ್ತಿ ಸುಖವಾಂತರಿಕವದು ನಿರವಧಿಸುಖ ||ಭಾಕ್ತ ಪ್ರಪಂಚಸುಖವೆಂತಪರಿಮಿತವಹುದು? |ರಿಕ್ತಸುಖ ಬಾಹ್ಯಸುಖ - ಮಂಕುತಿಮ್ಮ ||
ಶರಧಿಯೊಳಗಣ ವಸ್ತುಗಳನಲಚಿ ಜಾಲಿಸುವ |ತೆರೆಯಂತೆ ವಿಶ್ವಸತ್ತ್ವದ ಲಹರಿ ನಮ್ಮ ||ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ |ಭರಿಸುತಿರುವುದು ಬಾಳ - ಮಂಕುತಿಮ್ಮ ||
ಸತ್ತವೆನ್ನಾಶೆಗಳು; ಗೆದ್ದೆನಿಂದ್ರಿಯಗಣವ |ಚಿತ್ತವಿನ್ನಲುಗದೆಂಬಾ ಜಂಬ ಬೇಡ ||ಎತ್ತಣಿಂದಲೊ ಗಾಳಿ ಮೋಹಬೀಜವ ತಂದು |ಬಿತ್ತಲಾರದೆ ಮನದಿ? - ಮಂಕುತಿಮ್ಮ ||
ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ |ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |ತತ್ತ್ವದರ್ಶನವಹುದು - ಮಂಕುತಿಮ್ಮ ||
ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ? |ನೃತ್ಯವೇ ಸತ್ಯವಲ ಕಡಲಲೆಯ ಬಾಳೊಳ್ ||ಮಿಥ್ಯೆಯೆಂಬುದೆ ಮಿಥ್ಯೆ; ಜೀವನಾಟಕ ಸತ್ಯ |ಕೃತ್ಯವಿದು ಬೊಮ್ಮನದು - ಮಂಕುತಿಮ್ಮ ||
ಸದ್ದು ಮಾಡದೆ ನೀನು ಜಗಕೆ ಬಂದವನಲ್ಲ |ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು ||ಗದ್ದಲವ ಬಿಡಲು ಕಡೆದಿನವಾನುಮಾದೀತೆ? |ನಿದ್ದೆವೊಲು ಸಾವ ಪಡೆ - ಮಂಕುತಿಮ್ಮ ||
ಸಂಬಳದ ಹಂಬಲವೊ; ಡಾಂಬಿಕತೆಯಬ್ಬರವೊ |ಇಂಬು ಕೂರ್ಮೆಯ ಕರೆಯೊ; ಕರುಳ ಕರೆಕರೆಯೋ ||ತುಂಬಿಹುವು ಬಾಳಿನಲಿ ನೂರು ತಕರಾರುಗಳು |ಬೆಂಬಲವವೆಲೊ ಜಗಕೆ - ಮಂಕುತಿಮ್ಮ ||
ಸರಿ ಹದದ ಕಾಳು ತಿರೆಯಪ್ಪಿದೊಡೆ ಮೊಳೆಯುವುದು |ಹುರಿದೊಡದು ಮೊಳೆಯದರಳಹುದು ಬಾಯ್ಸವಿಗೆ ||ಪರಮತತ್ತ್ವಜ್ಞಾನಿಯೊಡರಿಸುವ ಕರುಮಗಳು |ಮರುಬೆಳೆಗೆ ಬಿತ್ತಲ್ಲ - ಮಂಕುತಿಮ್ಮ ||
ಸಿಂಧುವನು ಹಿಮಗಿರಿಗೆ ಹಿಂದಿರುಗಿ ಬೇರೊಂದು |ಚೆಂದದಲಿ ಪರಿದು ಬಾರೆಂದಾಣತಿಪೆಯಾ? ||ಸಂದರ್ಭವಿಡಿದು ಜನಚೈತನ್ಯ ಪರಿದಿಹುದು |ಅಂಧಗತಿಯಲ್ಲವದು - ಮಂಕುತಿಮ್ಮ ||
ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು |ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ||ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು? |ಕಿತ್ತ ಗಾಳಿಯ ಪಟವೊ - ಮಂಕುತಿಮ್ಮ ||
ಸೌಂದರ್ಯ ಬಾಂಧವ್ಯಗಳನು ಬರಿದೆನಲಹುದೆ? |ಹೊಂದಿಸವೆ ಕುಂದಿಸವೆ ಜೀವಿಗಳನವುಗಳ್? ||ಸಿಂಧುಪೂರದಿ ಬಿದ್ದವರೊಳೊಬ್ಬರೊಬ್ಬರನು |ಅಂದಿಕೊಳಲದು ಬರಿದೆ? - ಮಂಕುತಿಮ್ಮ ||