ಒಟ್ಟು 34 ಕಡೆಗಳಲ್ಲಿ , 1 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅನುರಾಗದುಃಖಂಗಳೊಮ್ಮೊಮ್ಮೆ ಬಿರುಬೀಸಿ |ಮನದಿ ತೆರೆಗಳ ಕುಲುಕಿ ಕಡೆಯುವುದುಮೊಳಿತು ||ಘನ ವರ್ಷ ಬಿರುಗಾಳಿ ಬಡಿಯಲಿರುಳೊಳ್ ನೆಲನ |ದಿನದ ಸೊಗಸಿಮ್ಮಡಿಯೊ - ಮಂಕುತಿಮ್ಮ ||
ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ! |ಆವಾಗಳಾವಕಡೆಗೆರಗುವುದೊ ಹಕ್ಕಿ! ||ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ |ಜೀವಮಾರ್ಗವನೂಹ್ಯ - ಮಂಕುತಿಮ್ಮ ||
ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ |ವಲೆಯಂತೆ ಲೋಕ ತಲ್ಲಣಿಸುತಿಹುದಿಂದು ||ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ |ತಳಮಳಕೆ ಕಡೆಯೆಂದೊ? - ಮಂಕುತಿಮ್ಮ ||
ಉದರಶಿಖಿಯೊಂದುಕಡೆ; ಹೃದಯಶಿಖಿಯೊಂದುಕಡೆ |ಕುದಿಸದಿರೆ ಜೀವಶಿಲೆ ಮೃದುವಪ್ಪುದೆಂತು? ||ಬದುಕಿನುರಿಯಲಿ ಕರಗಿ ತಿಳಿಯಾಗದಿಹ ಜೀವ |ಪುದಿಯದಾತ್ಮಾರ್ಣವದಿ - ಮಂಕುತಿಮ್ಮ ||
ಒಂದು ಕಡೆ ಚಿಗುರುತಲಿ; ಒಂದು ಕಡೆ ಬಾಡುತಲಿ |ಕಂದುತಿರೆ ಕೊಂಬೆ; ಮುಂಡದಲಿ ಹಬ್ಬುತಲಿ ||ಎಂದೆಂದುಮಶ್ವತ್ಥ ಹಳೆಹೊಸದು; ತಾನದಾ |ಸ್ಪಂದನವೊ ಬ್ರಹ್ಮನದು - ಮಂಕುತಿಮ್ಮ ||
ಕಕ್ಷಿಗಾರನವೊಲೇ ಪೋರುತ್ತೆ ನ್ಯಾಯಕ್ಕೆ |ಸಾಕ್ಷಿಯವೊಲಿರು ಕಡೆಗೆ ತೀರ್ಪಾಗುವಂದು ||ಭಿಕ್ಷುವೊಲು ಕಾಲ ಸವೆಯಿಸಿ ಲೋಕಯಾತ್ರೆಯಲಿ |ಪಕ್ಷಿವೊಲು ಮನದೊಳಿರು - ಮಂಕುತಿಮ್ಮ ||
ಕಡಲ ಕಡೆದರು ಸುರಾಸುರರು ನಿಜಬಲದಿಂದ |ಕುಡಿದನದನು ತಪಸ್ಸಿನಿಂದ ಕುಂಭಜನು ||ಕಡಮೆಜನ ಪಾರಗಾಂಬರೆ ಗಾಸಿಯನು ಪಡದೆ? |ಪೊಡವಿ ಬಾಳ್ವೆಯುಮಂತು - ಮಂಕುತಿಮ್ಮ ||
ಕಡೆಗಾಲವನು ತಾನೆ ಮುನ್ನರಿತು ಕಾಡಾನೆ- |ಯಡವಿಯೊಳದೊಂದು ದೂರದ ಗವಿಯನೈದಿ ||ಬಿಡುವುದಾಯೆಡೆ ಮೌನದಿಂದಸುವನೆನ್ನುವರು |ಕಡೆಯ ಸಾರಂತು ನೀಂ - ಮಂಕುತಿಮ್ಮ ||
ಜಗದೀ ಜಗತ್ತ್ವವನು; ಮಾಯಾವಿಚಿತ್ರವನು |ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು ||ಮಿಗುವುದೇಂ? ರೂಪಾಖ್ಯೆಯೊಂದುಮಿಲ್ಲದ ವಸ್ತು |ಹೊಗಿಸಾ ಕಡೆಗೆ ಮತಿಯ - ಮಂಕುತಿಮ್ಮ ||
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು |ತಿರೆಗುರುಳುವುದು ತನ್ನ ಬಲವ ತಾಂ ಕಳೆದು ||ನರನುಮಂತೆಯೆ ಸುತ್ತಿ ಸುತ್ತಿ ಕಡೆಗೊಂದು ದಿನ |ತೆರುವನಸ್ಥಿಯ ಧರೆಗೆ - ಮಂಕುತಿಮ್ಮ ||
ತೊಲಗು ನಿರ್ಜನದೆಡೆಗೆ; ತೊಲಗು ಮಸಣದ ಕಡೆಗೆ |ಒಲವ ಬೇಡಿಸದೆಡೆಗೆ; ಅಳುವು ಬರದೆಡೆಗೆ ||ವಿಲಯವಾಗಿಸಿ ಮನವನ್; ಅಲುಗಾಡಿಸದೆ ತುಟಿಯ |ತೊಲಗಿ ಮಲಗಲ್ಲಿ ನೀಂ - ಮಂಕುತಿಮ್ಮ ||
ನಗುವೊಂದು ರಸಪಾಕವಳುವೊಂದು ರಸಪಾಕ |ನಗುವಾತ್ಮ ಪರಿಮಳವ ಪಸರಿಸುವ ಕುಸುಮ ||ದುಗುಡವಾತ್ಮವ ಕಡೆದು ಸತ್ತ್ವವೆತ್ತುವಮಂತು |ಬಗೆದೆರಡನುಂ ಭುಜಿಸು - ಮಂಕುತಿಮ್ಮ ||
ನರಜೀವನದ ರಣದಿ ವಿಧಿಯ ಬಲವೊಂದು ಕಡೆ |ಚಿರವಿವೇಕದಿ ಬೆಳೆದ ನಲುಮೆಯೊಂದು ಕಡೆ ||ಉರುಬುತಿರೆ ಪುರುಷಂಗೆ ನಲುಮೆಯುಳಿತವೆ ಗೆಲವು |ಪುರುಷತನವೇ ವಿಜಯ - ಮಂಕುತಿಮ್ಮ ||
ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ |ಕೋಟಿ ನಟರಾಂತಿಹರು ಚಿತ್ರಪಾತ್ರಗಳ ||ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ |ನೋಟಕರು ಮಾಟಕರೆ - ಮಂಕುತಿಮ್ಮ ||
ಬದುಕು ಕದನದ ತೆರನೆ; ನೋಡೆ ಲೀಲೆಯ ಕದನ |ಮೊದಲುಮುಗಿವುಗಳಿರದ ಚಿತ್ರಲೀಲೆಯದು ||ಇದರೊಳೆಂದಿಗುಮಿರದು ಸೋಲ್ಗೆಲವು ಕಡೆಯೆಣಿಕೆ |ಸದರದಾಟವೆ ಮುಖ್ಯ - ಮಂಕುತಿಮ್ಮ ||