ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು? |ಗಟ್ಟಿ ನಿಲದದು ಬೀಳೆ ಗೋಡೆ ಬಿರಿಯುವುದು ||ಸೃಷ್ಟಿಕೋಟೆಯಲಿ ನೀನೊಂದಿಟಿಕೆ; ಸೊಟ್ಟಾಗೆ |ಪೆಟ್ಟು ತಿನ್ನುವೆ ಜೋಕೆ - ಮಂಕುತಿಮ್ಮ ||
ಕೆಟ್ಟ ಪ್ರಪಂಚವಿದು; ಸುಟ್ಟ ಕರಿ ನರಮನಸು |ಬಿಟ್ಟುಬಿಡಲರಿದದನು; ಕಟ್ಟಿಕೊಳೆ ಮಷ್ಟು ||ಮುಟ್ಟಿ ಮುಟ್ಟದವೋಲುಪಾಯದಿಂ ನೋಡದನು |ಗಟ್ಟಿ ಪುರುಳೇನಲ್ಲ - ಮಂಕುತಿಮ್ಮ ||
ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು |ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ? ||ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ |ಗಟ್ಟಿತನ ಗರಡಿ ಫಲ - ಮಂಕುತಿಮ್ಮ ||
ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ |ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ ||ಬಿಡಿಜೀವ ಸಂಗಾತಿಜೀವಗಳನರಸಿ ತಾಂ |ಪಡೆದಂದು ಪೂರ್ಣವದು - ಮಂಕುತಿಮ್ಮ ||
ಬೆಟ್ಟಕ್ಕೆ ಸನ್ನೆಹಾಕಿರುವ ಮಹದಾಶಿಗನೆ |ಗಟ್ಟಿಯೇ? ಸೊಟ್ಟಾಗದೇ ಸನ್ನೆಗೋಲು? ||ರಟ್ಟೆಯೇ ಮುರಿದೀತು ಮೈಮರೆತ ಸಾಹಸದಿ |ಎಷ್ಟುಚಿತವೋ ನೋಡು - ಮಂಕುತಿಮ್ಮ ||
ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ |ಬೇಡಲೊಳಿತಾವುದೆಂಬುದರರಿವುಮಿಲ್ಲ ||ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ |ನೀಡುಗೆದೆಗಟ್ಟಿಯನು - ಮಂಕುತಿಮ್ಮ ||
ಮೃತನ ಸಂಸಾರಕಥೆ ಶವವಾಹಕರಿಗೇಕೆ? |ಸತಿಯು ಗೋಳಿಡಲಿ; ಸಾಲಿಗನು ಬೊಬ್ಬಿಡಲಿ ||ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು |ಧೃತಿಯ ತಳೆ ನೀನಂತು - ಮಂಕುತಿಮ್ಮ ||
ಸುಟ್ಟಿ ಹಗ್ಗದ ಬೂದಿ ರೂಪಮಾತ್ರದಿ ಹಗ್ಗ |ಗಟ್ಟಿ ಜಗವಂತು ತತ್ತ್ವಜ್ಞಾನ ಸೋಕೆ ||ತೊಟ್ಟಿಹುದು ಲೋಕರೂಪವ; ತಾತ್ತ್ವಿಕನ ವೃತ್ತಿ |ಕಟ್ಟಿದವನಾತ್ಮವನು - ಮಂಕುತಿಮ್ಮ ||