ಒಟ್ಟು 38 ಕಡೆಗಳಲ್ಲಿ , 1 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಶ್ವತ್ಥವಿಲ್ಲಿ ಬಾಡಿದೊಡೇನು? ಚಿಗುರಲ್ಲಿ; |ನಶ್ವರತೆ ವಿಟಪ ಪರ್ಣಂಗಳಲಿ ಮಾತ್ರ; ||ಶಾಶ್ವತತೆ ರುಂಡಮೂಲದಲಿ; ಪರಿಚರಿಸದನು |ವಿಶ್ವಪ್ರಗತಿಯಂತು - ಮಂಕುತಿಮ್ಮ ||
ಆವ ನೆಲದಲಿ ಮೇದೊ; ಆವ ನೀರನು ಕುಡಿದೊ |ಆವು ಹಾಲ್ಗರೆವುದದನಾರು ಕುಡಿಯುವನೋ! ||ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! |ಭಾವಿಸಾ ಋಣಗತಿಯ - ಮಂಕುತಿಮ್ಮ ||
ಇನ್ನೇನು ಮತ್ತೇನು ಗತಿಯೆಂದು ಬೆದರದಿರು |ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ||ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು |ತಣ್ಣಗಿರಿಸಾತ್ಮವನು - ಮಂಕುತಿಮ್ಮ ||
ಇಹುದಕಿಂತೊಳಿತಿಹುದು; ಒಳಿತ ಗಳಿಸಲ್ಬಹುದು |ಸಹಸಿಸುವೆನದಕೆನುವ ಮತಿಯಿನೇ ಪ್ರಗತಿ ||ರಹಸಿಯದ ಬುಗ್ಗೆಯದು; ಚಿಮ್ಮುತಿಹುದೆಲ್ಲರೊಳು |ಸಹಜವಾ ಮತಿಕೃತಕ - ಮಂಕುತಿಮ್ಮ ||
ಎಡವದೆಯೆ; ಮೈಗಾಯವಡೆಯದೆಯೆ; ಮಗುವಾರು |ನಡೆಯ ಕಲಿತವನು? ಮತಿನೀತಿಗತಿಯಂತು ||ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- |ದಡವಿಕೊಳುವವರೆಲ್ಲ - ಮಂಕುತಿಮ್ಮ ||
ಎಲೆಕಟ್ಟನಾಗಾಗ ಕಲಸಿಕೊಡುವುದೆ ಸೃಷ್ಟಿ |ಬಳಿಕೆಲೆಯ ಗತಿಯೆಂತೊ ಎಲ್ಲಿ ಸೇರುವುದೋ! ||ಬಳಸುತಿಹುದೊಂದೊಂದುಮೊಂದೊಂದು ದಿಕ್ಕಿನಲಿ |ಅಲೆಯುವೆವು ನಾವಂತು - ಮಂಕುತಿಮ್ಮ ||
ಎಲ್ಲಿಯೋ ವಿಧಿಯ ಗೂಢದ ಕರ್ಮಶಾಲೆಯಲಿ |ನಿಲ್ಲದಾಡುತ್ತಿಹುವು ಯಂತ್ರಕೀಲುಗಳು ||ಎಲ್ಲಾಗುಹೋಗುಗಳುಮಾ ಚಕ್ರಗತಿಯಂತೆ |ತಲ್ಲಣವು ನಿನಗೇಕೆ? - ಮಂಕುತಿಮ್ಮ ||
ಏನೆ ನಿಜವಿರಲಿ ಮತ್ತೇನೆ ಸುಳ್ಳಾಗಿರಲಿ |ನಾನೆನಿಪ್ಪಾತ್ಮವೊಂದಿರುವುದನುಭವಿಕ ||ಹಾನಿಗಾವಾತನಾತ್ಮವನುಮಂ ಕೆಡಹದಿರು |ಧ್ಯಾನಿಸಾತ್ಮದ ಗತಿಯ - ಮಂಕುತಿಮ್ಮ ||
ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? |ಬಗೆದು ಬಿಡಿಸುವರಾರು ಸೋಜಿಗವನಿದನು? ||ಜಗವ ನಿರವಿಸಿದ ಕೈಯೊಂದಾದೊಡೇಕಿಂತು |ಬಗೆಬಗೆಯ ಜೀವಗತಿ? - ಮಂಕುತಿಮ್ಮ ||
ಕಷ್ಟ ಜೀವದ ಪಾಕ; ಕಷ್ಟ ಧರ್ಮವಿವೇಕ |ಎಷ್ಟೆಷ್ಟು ನೀತಿಯುಕ್ತಿಗಳ ಬಗೆದಡೆಯುಂ ||ಇಷ್ಟಷ್ಟು ನಿನ್ನೊಳ್ ಒಳತಿಳಿವಿಲ್ಲದಿರೆ ನಷ್ಟ |ದೃಷ್ಟಿಸೂಕ್ಷ್ಮವೆ ಗತಿಯೊ - ಮಂಕುತಿಮ್ಮ ||
ಕೇಳಿಯುಂ ಮಾಯೆಯದು; ನೃತ್ಯಗತಿ ಬರಿತೋರ್ಕೆ |ಮೂಲಮಂ ಕಂಡಂಗೆ ಸಂಭ್ರಾಂತಿಯೇನು? ||ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ |ಲೀಲಾಪ್ರಿಯಂ ಬ್ರಹ್ಮ - ಮಂಕುತಿಮ್ಮ ||
ಕ್ಷಿತಿಚಕ್ರ ರವಿಚಕ್ರ ಋತುಚಕ್ರಗಳಿಗಿಹುದು |ಮಿತವೃತ್ತಿ; ನರನಿಗಂತೆಯೆ ಕರ್ಮನಿಯತಿ ||ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ |ಅತಿಚರಿತೆ ಪ್ರಕೃತಿಯಲಿ - ಮಂಕುತಿಮ್ಮ ||
ಗತಿಯೇನು ಎನಗೆನುತ ಕೇಳ್ವವರೆ ಎಲ್ಲರುಂ |ಹಿತವೆಂತು ಜಗಕೆಂದು ಕೇಳುವವರಾರು? ||ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ |ಪಥ ಮುಕ್ತಿಗಾಗಳೇ - ಮಂಕುತಿಮ್ಮ ||
ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು |ಉರುಳಿಸಿರಲೊಂದೆರಡು ಮಾರು ಘಾಸಿಯಲಿ ||ಸರಿದು ಕೆಳಕದದೆಂತೊ ಜಾರುವುದು ಮರಮರಳಿ |ಪುರುಷಪ್ರಗತಿಯಂತು - ಮಂಕುತಿಮ್ಮ ||
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? |ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ ||ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ |ಸಹನೆ ವಜ್ರದ ಕವಚ - ಮಂಕುತಿಮ್ಮ ||