ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಏನಾದೊಡೆಯುಮಪ್ಪುದುಂಟು; ಸಿದ್ಧನಿರದಕೆ |ಭಾನು ತಣುವಾದನು; ಸೋಮ ಸುಟ್ಟಾನು ||ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು |ಮೌನದಲಿ ಸಿದ್ಧನಿರು - ಮಂಕುತಿಮ್ಮ ||
ಒಮ್ಮೆ ಹೂದೋಟದಲಿ; ಒಮ್ಮೆ ಕೆಳೆಕೂಟದಲಿ |ಒಮ್ಮೆ ಸಂಗೀತದಲಿ; ಒಮ್ಮೆ ಶಾಸ್ತ್ರದಲಿ ||ಒಮ್ಮೆ ಸಂಸಾರದಲಿ; ಮತ್ತೊಮ್ಮೆ ಮೌನದಲಿ |ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ ||
ಕವಿ ಚಿತ್ರಕೋವಿದನು ಪರತತ್ತ್ವಶೋಧಕನು |ವಿವಿಧ ವಾದನ ಗೀತ ನೃತ್ಯ ಕುಶಲಿಗಳು ||ನವನವತೆಯಂ ಮನಸಿಗೀವೆಲ್ಲ ಕಲೆಗಾರ- |ರವರಿಂದ ಸುಂದರತೆ - ಮಂಕುತಿಮ್ಮ ||
ದೇಹವೆಂಬುದು ಕುದುರೆಯಾತ್ಮನದರಾರೋಹಿ |ವಾಹನವನುಪವಾಸವಿರಿಸೆ ನಡೆದೀತೆ? ||ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ? |ಸ್ನೇಹವೆರಡಕಮುಚಿತ - ಮಂಕುತಿಮ್ಮ ||
ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ |ಸನ್ನಾಹ ಸಾಗೀತೆ? ದೈವವೊಪ್ಪೀತೆ? ||ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ; ಭಿನ್ನಿಸಲಿ; |ನಿನ್ನ ಬಲವನು ಮೆರಸೊ - ಮಂಕುತಿಮ್ಮ ||
ಪ್ರೀತಿಮಹಿಮೆಯ ಚಿತ್ರರೀತಿಯಂ ವಾಲ್ಮೀಕಿ |ನೀತಿಸೂಕ್ಷ್ಮದ ಗಹನಮಾರ್ಗಮಂ ವ್ಯಾಸರ್ ||ಗೀತೆಯಲಿ ವಿಶ್ವಜೀವನರಹಸ್ಯವನವರ್ |ಖ್ಯಾತಿಸಿಹರದು ಕಾವ್ಯ - ಮಂಕುತಿಮ್ಮ ||
ಮರುಕದುಂಬಿದ ಕಣ್ಣನೋಟದೊಳಗಿದ್ದೀತು |ಬಿರುನುಡಿಯೊಳಿರದೊಂದು ಕೂರಲಗು; ಸಖನೆ ||ಕರವಾಳಕದಿರದಿಹ ದುರಿತಕಾರಿಯ ಹೃದಯ |ಕರುಣೆಯಿಂ ಕರಗೀತೊ - ಮಂಕುತಿಮ್ಮ ||
ಸಂಗೀತ ತಲೆದೂಗಿಪುದು; ಹೊಟ್ಟೆ ತುಂಬೀತೆ? |ತಂಗದಿರನೆಸಕ ಕಣ್ಗಮೃತ; ಕಣಜಕದೇಂ? ||ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ |ಪೊಂಗುವಾತ್ಮವೆ ಲಾಭ - ಮಂಕುತಿಮ್ಮ ||
ಸಂಗೀತಕಲೆಯೊಂದು; ಸಾಹಿತ್ಯಕಲೆಯೊಂದು |ಅಂಗಾಂಗ ಭಾವ ರೂಪಣದ ಕಲೆಯೊಂದು ||ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ |ಮಂಗಳೋನ್ನತ ಕಲೆಯೊ - ಮಂಕುತಿಮ್ಮ ||
ಸ್ವರರಾಗಗೀತಿಗಳು ನಾಟ್ಯಾಭಿನೀತಿಗಳು |ಕರೆದೇಳಿಸುವುವು ಮನಸಿನಲಿ ನಿದ್ರಿಸುವಾ ||ಪರಿಪರಿಯ ಭಾವಗಳ ಗೂಢಸ್ವಭಾವಗಳ |ಪರಮೇಷ್ಠಿ ಟೀಕು ಕಲೆ - ಮಂಕುತಿಮ್ಮ ||
ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ |ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ ||ಹೊಟ್ಟೆ ತುಂಬಿದ ತೋಳ ಮಲಗೀತು; ನೀಂ ಪೆರರ |ದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ ||