ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು |ಆವನಾ ಬಂಧುತೆಯ ಜಡೆಯ ಬಿಡಿಸುವನು? ||ಜೀವ ಜೀವಕೆ ನಂಟು ಜಡ ಚೇತನಕೆ ನಂಟು |ಆವುದದಕಂಟಿರದು? - ಮಂಕುತಿಮ್ಮ ||
ಕನಸು ದಿಟ; ನೆನಸು ದಿಟ; ತನುವೊಳಿಹ ಚೇತನವ |ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ||ಇನಿತನಿತು ದಿಟಗಳಿವು---ತುಂಬುದಿಟದಂಶಗಳು |ಗಣನೀಯವವು ಬಾಳ್ಗೆ - ಮಂಕುತಿಮ್ಮ ||
ಗೋಳಾಡಲುಂ ಬೇಡ; ಲೋಲಾಪ್ತಿಯುಂ ಬೇಡ |ಬಾಳು ಪರಚೇತನದ ಕೇಳಿಯೆಂದೆಣಿಸಿ ||ಪಾಲಿಗನು ನೀನದರೊಳೆನಿಪಂತೆ ಬಾಳುತಿರು |ಕೇಳಿಯುಂ ಧರ್ಮವೆಲೊ - ಮಂಕುತಿಮ್ಮ ||
ಗೌರವಿಸು ಜೀವನವ; ಗೌರವಿಸು ಚೇತನವ |ಆರದೋ ಜಗವೆಂದು ಭೇದವೆಣಿಸದಿರು ||ಹೋರುವುದೆ ಜೀವನಸಮೃದ್ಧಿಗೋಸುಗ ನಿನಗೆ |ದಾರಿಯಾತ್ಮೋನ್ನತಿಗೆ - ಮಂಕುತಿಮ್ಮ ||
ಜಡವೆಂಬುದೇನು? ಸೃಷ್ಟಿಯಲಿ ಚೇತನ ಸುಪ್ತಿ |ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿ ||ಮಿಡಿಯೆ ಪರಸತ್ತ್ವ ವಿದ್ಯುದ್ದೀಪ್ತಿಯದನಾಗ |ನಡೆವುದದು ಜೀವಿವೊಲು - ಮಂಕುತಿಮ್ಮ ||
ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳೆಗೆ |ನಾನೆನುವ ಚೇತನದಿ ರೂಪಗೊಂಡಿಹುದೋ? ||ನಾನೆನುವ ಕೇಂದ್ರದಿನೆ ಹೊರಟ ಸತ್ತ್ವದ ಪರಿಧಿ |ಬಾನಾಚೆ ಹಬ್ಬಿಹುದೊ? - ಮಂಕುತಿಮ್ಮ ||
ಭೌತವಿಜ್ಞಾನಿ ರವಿತಾರೆಧರೆಗಳ ಚಲನ |ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ||ಪ್ರೀತಿರೋಷಗಳನವನಳೆವನೇನ್? ಅವ್ಯಕ್ತ |ಚೇತನವನರಿವನೇಂ? - ಮಂಕುತಿಮ್ಮ ||
ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ |ಹೊನಲು ನೂರೀ ಬಾಳ ಕಡಲನುಬ್ಬಿಸಲಿ ||ತನುಬಂಧ ಕಳಚಿ; ಜೀವವಖಂಡಚೇತನದ |ಕುಣಿತದಲಿ ಕೂಡಿರಲಿ - ಮಂಕುತಿಮ್ಮ ||
ಶಶ್ವದ್ವಿಕಾಸನ ಹ್ರಾಸನ ಕ್ರಮಗಳಿಂ |ವಿಶ್ವದಲಿ ನರ್ತಿಸುತೆ ಪೌರುಷೋನ್ನತಿಯೊಳ್ ||ಸ್ವಸ್ವರೂಪವನರಸುವಾಟ ಪರಚೇತನದ |ಹೃಷ್ಯದ್ವಿಲಾಸವೆಲೊ - ಮಂಕುತಿಮ್ಮ ||
ಸುಂದರತೆಯೆನುವುದೇಂ? ಜನಕೆ ಮೈಮರೆಯಿಪಾ- |ನಂದದೊಳಮರುಮವೇಂ? ವಿಶ್ವಚೇತನದಾ ||ಸ್ಪಂದನವೆ ಸೌಂದರ್ಯಮದುವೆ ಜೀವನಮೂಲ |ಬಂಧುರತೆ ಬೊಮ್ಮನದು - ಮಂಕುತಿಮ್ಮ ||
ಸೇರಿರ್ಪುವುಸಿರುಸಿರುಗಳೂಳೆಷ್ಟೊ ಜೀವಾಣು |ಹಾರುತಿಹುವೆಷ್ಟೊ ಚೇತನ ಧೂಳುಕಣದೊಳ್ ||ಪ್ರಾರಬ್ಧಗತಿಯ ನಿಶ್ಚಯದಿ ತಿಳಿವವರಿಲ್ಲ |ಆ ರಹಸ್ಯಕ್ಕೆರಗೊ! - ಮಂಕುತಿಮ್ಮ ||