ಒಟ್ಟು 20 ಕಡೆಗಳಲ್ಲಿ , 1 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಣಗಿದ್ದು ಬೇಸಗೆಯೊಳ್; ಎದ್ದು ಮಳೆ ಕರೆದಂದು |ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳೆದು ||ಉಣಿಸನೀವನು ದನಕೆ; ತಣಿವನೀವನು ಜಗಕೆ |ಗುಣಶಾಲಿ ತೃಣಸಾಧು - ಮಂಕುತಿಮ್ಮ ||
ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ |ನಿನ್ನ ದುಡಿತದ ಬೆಮರೊ; ಪೆರರ ಕಣ್ಣೀರೋ? ||ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ |ಜೀರ್ಣಿಸದ ಋಣಶೇಷ - ಮಂಕುತಿಮ್ಮ ||
ಅಷ್ಟದಿಗ್ಗಜವೆ ನೀನ್? ಆದಿಶೇಷನೆ ನೀನು? |ಕಷ್ಟಭಾರವಿದೆಂದು ನಿಟ್ಟುಸಿರ ಬಿಡುವೆ! ||ನಿಷ್ಠುರದ ನಿನ್ನ ಕನಿಕರ ಜಗಕೆ ಬೇಕಿಲ್ಲ |ಎಷ್ಟಾದರಷ್ಟೆ ಸರಿ - ಮಂಕುತಿಮ್ಮ ||
ಆತುಮದ ಸಂಸ್ಥಿತಿಗೆ ದೈಹಿಕಸಮಾಧಾನ; |ಭೌತವಿಜ್ಞಾನದಾ ರಾಷ್ಟ್ರಸಂಸ್ಥೆಗಳಾ ||ನೂತನ ವಿವೇಕಪ್ರಯೋಗಗಳಿನಾದೀತು |ಭೂತಿಸಂಪದ ಜಗಕೆ - ಮಂಕುತಿಮ್ಮ ||
ಆದಿದಿವಸವದಾವುದೆಂದೆಂದುಮಿಹ ಜಗಕೆ? |ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ||ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ |ಸೇದಿಕೊಂಡಿರೆ ಲಯವೊ - ಮಂಕುತಿಮ್ಮ ||
ಆವ ನೆಲದಲಿ ಮೇದೊ; ಆವ ನೀರನು ಕುಡಿದೊ |ಆವು ಹಾಲ್ಗರೆವುದದನಾರು ಕುಡಿಯುವನೋ! ||ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! |ಭಾವಿಸಾ ಋಣಗತಿಯ - ಮಂಕುತಿಮ್ಮ ||
ಕಾಯಂಕಿಂತಾತ್ಮ ಪಿರಿದೆಂದು ಜನವರಿತಂದು |ಸ್ವೀಯೇಚ್ಛೆಯಿಂ ಸಮಾಧಾನ ಕೆಡದಂದು ||ದಾಯ ಸಮ ಸಂಸೃಷ್ಟಿ ಭೂಭಾಗ್ಯವಾದಂದು |ಶ್ರೇಯ ನೆರೆವುದು ಜಗಕೆ - ಮಂಕುತಿಮ್ಮ ||
ಗತಿಯೇನು ಎನಗೆನುತ ಕೇಳ್ವವರೆ ಎಲ್ಲರುಂ |ಹಿತವೆಂತು ಜಗಕೆಂದು ಕೇಳುವವರಾರು? ||ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ |ಪಥ ಮುಕ್ತಿಗಾಗಳೇ - ಮಂಕುತಿಮ್ಮ ||
ಜವನ ನಿಂದಿಪುದೇಕೆ ಸರ್ವಘಾತಕನೆಂದು? |ಭುವಿಗೆ ವೃದ್ಧಸಮೃದ್ಧಿಯವನು ಸುಮ್ಮನಿರಲ್ ||ನವಜನಕ್ಕೆಡೆಯೆತ್ತಲಾರುಮೆಡೆಬಿಡದೆ ನಿಲೆ? |ನವತೆಯವನಿಂ ಜಗಕೆ - ಮಂಕುತಿಮ್ಮ ||
ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ |ನಿಜಕುಕ್ಷಿಚಿಂತೆಯೇಂ ಮೊದಲು ಮನೆತಾಯ್ಗೆ? ||ಭುಜಿಪ ಪತಿಸುತರೊಪ್ಪು ತುಪ್ಪವವಳೂಟಕ್ಕೆ |ಭಜಿಸು ನೀನಾ ವ್ರತವ - ಮಂಕುತಿಮ್ಮ ||
ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ |ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ||ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ |ಒಂಟಿಸಿಕೊ ಜೀವನವ - ಮಂಕುತಿಮ್ಮ ||
ಭೋಜನದಿ ಪರಮಭೋಜನ ಪರಬ್ರಹ್ಮರಸ |ಯಾಚಿಸಲ್ಕೇನಿರ್ಪುದದನುಂಡ ಬಳಿಕ? ||ತ್ಯಾಜಕ ತ್ಯಾಗ ಸಂತ್ಯಾಜ್ಯ ಭೇದಗಳಿರದೆ |ರಾಜ ನೀಂ ಜಗಕೆಲ್ಲ - ಮಂಕುತಿಮ್ಮ ||
ಮಾಯೆಯೆಂಬಳ ಸೃಜಿಸಿ; ತಾಯನಾಗಿಸಿ ಜಗಕೆ |ಆಯಸಂಗೊಳುತ ಸಂಸಾರಿಯಾಗಿರುವಾ ||ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ |ಹೇಯವದರೊಳಗೇನೊ - ಮಂಕುತಿಮ್ಮ ||
ಮೂರಿರಲಿ ವಾದ; ಮುನ್ನೂರಿರಲಿ; ಸಕಲರುಂ |ಸಾರವಸ್ತುವನೊಂದನೊಪ್ಪಿಕೊಳುವವರೇ ||ಪಾರಮಾರ್ಥಿಕವನಂತೆಣಿಸಿದ ವ್ಯವಹಾರ |ಭಾರವಾಗದು ಜಗಕೆ - ಮಂಕುತಿಮ್ಮ ||
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ |ಜಗಕೆ ಕಾಣಿಪುದೊಂದು; ಮನೆಯ ಜನಕೊಂದು ||ಸೊಗಸಿನೆಳಸಿಕೆಗೊಂದು; ತನ್ನಾತ್ಮಕಿನ್ನೊಂದು |ಬಗೆಯೆಷ್ಟೊ ಮೊಗವಷ್ಟು - ಮಂಕುತಿಮ್ಮ ||