ಒಟ್ಟು 46 ಕಡೆಗಳಲ್ಲಿ , 1 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು |ಚೆಂದಳಿರು ದಿನದಿನಮುಮೊಗೆಯೆ ನೀರೆರೆದು ||ಸಂದ ಬಲದಿಂದ ಜಗದಶ್ವತ್ಥ ಸೇವೆಯಲಿ |ನಿಂದಿರುವುದಲೆ ಧರ್ಮ - ಮಂಕುತಿಮ್ಮ ||
ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ |ಭೋಜನವ ನೀಡೆನೆನೆ ಮನ ಸುಮ್ಮನಿಹುದೆ? ||ಸಾಜಗಳ ಕೊಲ್ಲೆನುವ ಹಠಯೋಗಕಿಂತ ಸರಿ |ರಾಜಯೋಗದುಪಾಯ - ಮಂಕುತಿಮ್ಮ ||
ಉದರದೈವಕೆ ಜಗದೊಳೆದುರು ದೈವವದೆಲ್ಲಿ? |ಮೊದಲದರ ಪೂಜೆ; ಮಿಕ್ಕೆಲ್ಲದವರಿಂದ ||ಮದಿಸುವುದದಾದರಿಸೆ; ಕುದಿವುದು ನಿರಾಕರಿಸೆ |ಹದದೊಳಿರಿಸುವುದೆಂತೊ? - ಮಂಕುತಿಮ್ಮ ||
ಋಣವ ತೀರಿಸಬೇಕು; ಋಣವ ತೀರಿಸಬೇಕು |ಋಣವ ತೀರಿಸುತ ಜಗದಾದಿಸತ್ತ್ವವನು ||ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು |ಮನೆಯೊಳಗೆ ಮಠ ನಿನಗೆ - ಮಂಕುತಿಮ್ಮ ||
ಎತ್ತಣಿನೊ ದೃಕ್ಪರಿಧಿಯಾಚೆಯಿಂದಲನಂತ |ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ||ಬಿತ್ತರಿಸುತಿಹುದು ಹೊಸಹೊಸತನವನೆಡೆಬಿಡದೆ |ನಿತ್ಯನಿತ್ಯವು ಜಗದಿ - ಮಂಕುತಿಮ್ಮ ||
ಏನಾನುಮಂ ಮಾಡು ಕೈಗೆ ದೊರತುಜ್ಜುಗವ |ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ ||ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ |ತಾಣ ನಿನಗಿಹುದಲ್ಲಿ - ಮಂಕುತಿಮ್ಮ ||
ಒರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ? |ನೂರ್ವರಣಗಿಹರು ನಿನ್ನಾತ್ಮಕೋಶದಲಿ ||ಪೂರ್ವಿಕರು; ಜತೆಯವರು; ಬಂಧುಸಖಶತ್ರುಗಳು |ಸರ್ವರಿಂ ನಿನ್ನ ಗುಣ - ಮಂಕುತಿಮ್ಮ ||
ಓರೊರ್ವನಿಚ್ಛೆಗುಣವೊಂದೊಂದು ಬಗೆ ಜಗದಿ |ಭಾರಮೋರೊರ್ವನಿಂಗೊಂದೊಂದು ತೆರದಿ ||ದಾರಗಳಿನವರ ವಿಧಿ ಪಿಡಿದು ಕುಣಿದಾಡಿಸಲು |ನೂರುಜಡೆಕೋಲಾಟ - ಮಂಕುತಿಮ್ಮ ||
ಕಣ್ಣಿರದೆ ರವಿಯೇನು? ರವಿಯಿರದೆ ಕಣ್ಣೇನು? |ಅನ್ಯೋನ್ಯ ಸಹಕೃತಿಯಿನುಭಯ ಸಾರ್ಥಕತೆ ||ನಿನ್ನಾತ್ಮ ಜಗದಾತ್ಮಕಂತು ಸಂಬಂಧವವು |ವಹ್ನಿಸ್ಫುಲಿಂಗಗಳೊ - ಮಂಕುತಿಮ್ಮ ||
ಕೊಳದಿ ನೀಂ ಮೀವಂದು ತೆರೆಯೆದ್ದು ಹರಡುತ್ತೆ |ವಲಯವಲಯಗಳಾಗಿ ಸಾರುವುದು ದಡಕೆ ||ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು |ಕಲೆತುಕೊಳ್ಳಲಿ ಜಗದಿ - ಮಂಕುತಿಮ್ಮ ||
ಗಗನ ಬಿಸಿಗವಸಾಗಿ; ಕೆರೆಗಳಾವಿಗೆಯಾಗಿ |ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ||ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ |ಮುಗಿಲವೊಲು ದೈವಕೃಪೆ - ಮಂಕುತಿಮ್ಮ ||
ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು |ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು ||ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು |ಬಗೆಯಲರಿತವನೆ ಸುಖಿ - ಮಂಕುತಿಮ್ಮ ||
ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ |ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ||ಗಗನದೊಳನಂತದರ್ಶನದೆ ಮುಕ್ತಿಯನೊಂದು |ನಗುನಗಿಸಿ ಲೋಕವನು - ಮಂಕುತಿಮ್ಮ ||
ಜಗದ ಸಂತಾಪ ಸಂತಸ ಸಂಭ್ರಮಂಗಳುಲಿ |ಬಗಿದು ನರನೆದೆಯ; ಜೀವವ ಪಿಡಿದು ಕುಲುಕೆ ||ಸೊಗಯಿಪುದು ಮನಸಿಗದು ಕವಿಕಲಾರಸಿಕರ್ಗೆ |ಜಗ ಸೂರ್ಯಂ ನೀಂ ಕಮಲ - ಮಂಕುತಿಮ್ಮ ||
ಜಗದ ಸೊಗದರಸಿಕೆಯ ಫಲ; ನೋಡು; ಬರಿಕಲಹ |ಮೃಗಗಳಾವೇಶಗೊಳಲಪ್ಪುದಿನ್ನೇನು? ||ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು |ಹಗೆತನವುಮಂತು ಬಿಡು - ಮಂಕುತಿಮ್ಮ ||