ಒಟ್ಟು 32 ಕಡೆಗಳಲ್ಲಿ , 1 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು |ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ||ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು |ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ ||
ಅಳುವೇನು? ನಗುವೇನು? ಹೃತ್ಕಪಾಟೋದ್ಘಾಟ |ಶಿಲೆಯೆ ನೀಂ ಕರಗದಿರಲ್? ಅರಳದಿರೆ ಮರಳೇಂ? ||ಒಳಜಗವ ಹೊರವಡಿಪ; ಹೊರಜಗವನೊಳಕೊಳುವ |ಸುಳುದಾರಿಯಳುನಗುವು - ಮಂಕುತಿಮ್ಮ ||
ಆಶೆ ಬಲೆಯನು ಬೀಸಿ; ನಿನ್ನ ತನ್ನೆಡೆಗೆಳೆದು |ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ||ಮೈಸವರಿ ಕಾಲನೆಡವಿಸಿ; ಗುಟ್ಟಿನಲಿ ನಗುವ |ಮೋಸದಾಟವೊ ದೈವ - ಮಂಕುತಿಮ್ಮ ||
ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ- |ಲೆಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ||ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ |ಬಲ್ಲವನೆ ಮುಕ್ತನಲ - ಮಂಕುತಿಮ್ಮ ||
ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ? |ಓಲೆಗಳನವರವರಿಗೈದಿಸಿರೆ ಸಾಕು ||ಸಾಲಗಳೊ; ಶೂಲಗಳೊ; ನೋವುಗಳೊ; ನಗುವುಗಳೊ! |ಕಾಲೋಟವವನೂಟ - ಮಂಕುತಿಮ್ಮ ||
ಕರುಮ ಬಂದಿದಿರಹುದು ಮೋಹನದ ರೂಪಿನಲಿ |ಕಿರುನಗುವು ಕುಡಿನೋಟ ಕೊಂಕುನುಡಿಗಳಲಿ ||ಕರೆದು ತಳ್ಳುವ; ತಳ್ಕರಿಸುತೊಳಗೆ ಕಿಚ್ಚಿಡುವ |ತರಳತೆಯದೇಂ ತಂತ್ರ? - ಮಂಕುತಿಮ್ಮ ||
ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯ್ತೆ? |ವಿಷದ ಪೂತನಿ ನಯನಪಕ್ಷ್ಮದೊಳಗಿರಳೆ? ||ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಕೆಗೆ? |ಮೃಷೆಯೊ ಮೈಬೆಡಗೆಲ್ಲ - ಮಂಕುತಿಮ್ಮ ||
ಕೈಕೇಯಿ ಸತ್ಯಭಾಮೆಯರಂಶವಿರದ ಪೆಣ್ |ಲೋಕದೊಳಗಿರಳು; ಬೆಳೆವುದು ಲೋಕವವರಿಂ ||ಸಾಕಿ ಸಲಹುವ ಮತ್ಸರವದು ಸೃಷ್ಟಿಯುಪಾಯ |ಬೇಕದಕೆ ನಗು ಸಹನೆ - ಮಂಕುತಿಮ್ಮ ||
ಗಗನ ತಲೆನವಿರಾಗೆ ಪೆರೆತಾರೆ ಹೂವಾಗೆ |ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ||ನಗುನಗುವ ಬೊಬ್ಬಿಡುವ ಜೀವತಾಂಡವರಸಿಕ |ಭಗವಂತ ಶಿವರುದ್ರ - ಮಂಕುತಿಮ್ಮ ||
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ |ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ||ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ |ಬಿಡಿಗಾಸು ಹೂವಳಗೆ - ಮಂಕುತಿಮ್ಮ ||
ಚೆಲುವುನಗುವುಗಳ ಕಂಡವನ ಕಣ್ಣರಳುವುದು |ಅಳುವುನೋವುಗಳ ಕಂಡೊದ್ದೆಯಾಗುವುದು ||ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು |ಶಿಲೆಯಲ್ಲ ಯೋಗಿಯೆದೆ - ಮಂಕುತಿಮ್ಮ ||
ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ |ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ||ಗಗನದೊಳನಂತದರ್ಶನದೆ ಮುಕ್ತಿಯನೊಂದು |ನಗುನಗಿಸಿ ಲೋಕವನು - ಮಂಕುತಿಮ್ಮ ||
ಟಗರೆರಡ ಬೆಳಸಿ ಕೊಬ್ಬಿಸಿ ಕೆಣಕಿ ಹುರಿಗೊಳಿಸಿ |ಜಗಳವಾಡಿಸಿ ದೈವಜೀವಗಳ ಪೆಸರಿಂ ||ನಗುತಲಿರುವನು ನೋಡಿ; ಪರಬೊಮ್ಮನೇಂ ಬಿನದಿ! |ಬಿಗಿಯದಿರು ನೀಂ ಬೀಗಿ - ಮಂಕುತಿಮ್ಮ ||
ತನ್ನ ಮನದಾಟಗಳ ತಾನೆ ನೋಡುತ ನಗುವ |ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |ಧನ್ಯತೆಯ ಕಂಡವನು - ಮಂಕುತಿಮ್ಮ ||
ತಳಿರ ನಸುಕೆಂಪು; ಬಳುಕೆಲೆಯ ಹಸುರಿನ ಸೊಂಪು |ತಿಳಿಮನದ ಯುವಜನದ ನಗುಗಣ್ಣ ಹೊಳಪು ||ಬೆಳೆವರಿವು ಮಗುದುಟಿಯಿನುಣ್ಮಿಸುವ ನುಡಿಚಿಗುರು |ಇಳೆಯೊಳಿವನೊಲ್ಲನಾರ್? - ಮಂಕುತಿಮ್ಮ ||