ಒಟ್ಟು 17 ಕಡೆಗಳಲ್ಲಿ , 1 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅರೆಯರೆಯೆ ನಮಗೆ ತೋರ್ಪೊಲವು ಚೆಲುವುಗಳೆಲ್ಲ |ಪರಿಪೂರ್ಣ ಸುಖ ಸತ್ತ್ವ ಸಾಗರದ ತೆರೆಗಳ್ ||ತರಣಿ ದೂರದೊಳಿಹನು; ಕಿರಣ ನಮಗೆಟಕುವುದು |ತೆರೆಯು ನೆರೆತದ ಕುರುಹೊ - ಮಂಕುತಿಮ್ಮ ||
ಅಳಬೇಕು; ನಗಬೇಕು; ಸಮತೆ ಶಮವಿರಬೇಕು |ಹೊಳೆಯ ನೆರೆವೂಲು ಹೃದಯರಸ ಹರಿಯಬೇಕು ||ಅಲೆಯಿನರಲು ಗದ ಬಂಡೆಯವೊಲಾತ್ಮವಿರಬೇಕು |ತಿಳಿದವರ ಚರಿತವದು - ಮಂಕುತಿಮ್ಮ ||
ಕಡಲ್ಗಳೊಂದಾದೊಡಂ; ಪೊಡವಿ ಹಬೆಯಾದೊಡಂ |ಬಿಡದಿರೊಳನೆಮ್ಮದಿಯ; ಬಿಡು ಗಾಬರಿಕೆಯ ||ಕಡಲ ನೆರೆ ತಗ್ಗುವುದು; ಪೊಡವಿ ಧೂಳಿಳಿಯುವುದು |ಗಡುವಿರುವುದೆಲ್ಲಕಂ - ಮಂಕುತಿಮ್ಮ ||
ಕಾಯಂಕಿಂತಾತ್ಮ ಪಿರಿದೆಂದು ಜನವರಿತಂದು |ಸ್ವೀಯೇಚ್ಛೆಯಿಂ ಸಮಾಧಾನ ಕೆಡದಂದು ||ದಾಯ ಸಮ ಸಂಸೃಷ್ಟಿ ಭೂಭಾಗ್ಯವಾದಂದು |ಶ್ರೇಯ ನೆರೆವುದು ಜಗಕೆ - ಮಂಕುತಿಮ್ಮ ||
ಜೀವ ಜಡರೂಪ ಪ್ರಪಂಚವನದಾವುದೋ |ಆವರಿಸಿಕೊಂಡುಮೊಳನೆರೆದುಮಿಹುದಂತೆ||ಭಾವಕೊಳಪಡದಂತೆ ಅಳತೆಗಳವಡದಂತೆ |ಆ ವಿಶೇಷಕೆ ಮಣಿಯೊ - ಮಂಕುತಿಮ್ಮ ||
ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು |ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ||ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು |ನೆಲೆಯೆಲ್ಲಿ ನಿದ್ದೆಗೆಲೊ? - ಮಂಕುತಿಮ್ಮ ||
ತೆರೆಯೇಳುವುದು ದೈವಸತ್ತ್ವ ನರನೊಳು ನೆರೆಯೆ |ತೆರೆ ಬೀಳುವುದು ಕರ್ಮವಿಧಿಯಿದಿರು ಪರಿಯೆ ||ತೆರೆಯನಾನುತೆ ತಗ್ಗು; ತಗ್ಗನಾನುತಲಿ ತೆರೆ |ತೆರೆತಗ್ಗುಗಳಿನೆ ತೊರೆ - ಮಂಕುತಿಮ್ಮ ||
ನರನಾರಿಮೋಹದಿಂ ವಂಶವದಕಾಗಿ ಮನೆ |ನೆರೆ ಹೊರೆಗಳೂರು ರಾಷ್ಟ್ರಗಳು ಸಂಘಗಳು ||ಕೆರೆಯೊಂದು ಕೇಂದ್ರದಿಂದಲೆಯ ಬಳೆಗಳು ನೂರು |ಹರಿವಂತೆ ಸಂಸಾರ - ಮಂಕುತಿಮ್ಮ ||
ನೀರ ನೆರೆ ತನ್ನೆದುರಿನಣೆಕಟ್ಟನೊದೆಯುವುದು |ಊರನದು ಕೊಚ್ಚುವುದು ಬದಿಯ ಕಟ್ಟದಿರೆ ||ಏರಿಗಳನಿಕ್ಕೆಲದಿ ನಿಲಿಸೆ ಹರಿವುದು ಸಮನೆ |ಪೌರುಷದ ನದಿಯಂತು - ಮಂಕುತಿಮ್ಮ ||
ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ |ನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ ||ಕೆರಳಿಸುತ ಹಸಿವುಗಳ; ಸವಿಗಳನು ಕಲಿಸುವಳು |ಗುರು ರುಚಿಗೆ ಸೃಷ್ಟಿಯಲ - ಮಂಕುತಿಮ್ಮ ||
ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು |ನೆರೆಬಂದ ನದಿ ದಡಕೆ ಬಾಗಿ ಪರಿಯುವುದೇಂ? ||ಧರುಮಸೂಕ್ಷ್ಮದ ತಿಳಿವೆ ಲೋಕಸೂತ್ರದ ಸುಳುವು |ಅರಸು ಜೀವಿತ ಹಿತವ - ಮಂಕುತಿಮ್ಮ ||
ಬಂಧನಗಳೆಲ್ಲವನು ದಾಟಿ; ಹೊಳೆ ನೆರೆ ನೀರು |ಸಂಧಿಪುದು ಕಡಲ ನೀರ್ಗಳನ್; ಅಂತು ಜೀವನ್ ||ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ |ಸಂದರುಶಿಪನು ಪರನ - ಮಂಕುತಿಮ್ಮ ||
ಮಾನವರೊ ದಾನವರೊ ಭೂಮಾತೆಯನು ತಣಿಸೆ |ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ||ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ |ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ ||
ಶರಧಿಯೊಳಗಣ ವಸ್ತುಗಳನಲಚಿ ಜಾಲಿಸುವ |ತೆರೆಯಂತೆ ವಿಶ್ವಸತ್ತ್ವದ ಲಹರಿ ನಮ್ಮ ||ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ |ಭರಿಸುತಿರುವುದು ಬಾಳ - ಮಂಕುತಿಮ್ಮ ||
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ |ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ||ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು? |ಒರಟು ಕೆಲಸವೊ ಬದುಕು - ಮಂಕುತಿಮ್ಮ ||