ಒಟ್ಟು 28 ಕಡೆಗಳಲ್ಲಿ , 1 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂದಿಗಂದಿನ ಕೆಲಸ; ಸಂದನಿತರಲಿ ತೃಪ್ತಿ |ಕುಂದದುಬ್ಬದ ಮನಸು ಬಂದುದೇನಿರಲಿ ||ಬಂಧು ಮತಿ ಲೋಕದಲಿ; ಮುನ್ದೃಷ್ಟಿ ಪರಮದಲಿ |ಹೊಂದಿರಲಿವದು ಪುಣ್ಯ - ಮಂಕುತಿಮ್ಮ ||
ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ |ದುಡಿ ಕೈಯಿನಾದನಿತು; ಪಡು ಬಂದ ಪಾಡು ||ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು |ಬಿಡುಗಡೆಗೆ ದಾರಿಯದು - ಮಂಕುತಿಮ್ಮ ||
ಎಲ್ಲರುಂ ಜಿತಮನಸ್ಕರೆ ದೈವ ವಿಧಿ ಮಾಯೆ |ಚೆಲ್ವುರೂಪಿಂ ಬಂದು ಕಣ್ಕುಕ್ಕುವನಕ ||ವಲ್ಗುರೂಪ ಸುಭದ್ರೆ ಕಣ್ಮುಂದೆ ಸುಳಿವನಕ |ಫಲ್ಗುಣನು ಸಂನ್ಯಾಸಿ - ಮಂಕುತಿಮ್ಮ ||
ಏನೇನು ಹಾರಾಟ ಸುಖಕೆಂದು ಲೋಕದಲಿ |ತಾನಾಗಿ ಗಾಳಿವೊಲ್ ಬಂದ ಸುಖವೆ ಸುಖ ||ನೀನೆ ಕೈ ಬೀಸಿಕೊಳೆ ನೋವು ಬೆವರುಗಳೆ ಫಲ |ಮಾಣು ಮನದುಬ್ಬಸವ - ಮಂಕುತಿಮ್ಮ ||
ಒಡೆಯನೆಂದೋ ಬಂದು ಕೇಳ್ವನದಕುತ್ತರವ |ಕೊಡಬೇಕು ತಾನೆನುವವೊಲು ಋಜುತೆಯಿಂದ ||ಒಡಲ; ಜಾಣಿನ; ಜೀವಶಕ್ತಿಗಳನೆಲ್ಲವನು |ಮುಡುಪುಕೊಟ್ಟನು ಭರತ - ಮಂಕುತಿಮ್ಮ ||
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು |ಬಂದುದೀ ವೈಷಮ್ಯ? - ಮಂಕುತಿಮ್ಮ ||
ಕರುಮ ಬಂದಿದಿರಹುದು ಮೋಹನದ ರೂಪಿನಲಿ |ಕಿರುನಗುವು ಕುಡಿನೋಟ ಕೊಂಕುನುಡಿಗಳಲಿ ||ಕರೆದು ತಳ್ಳುವ; ತಳ್ಕರಿಸುತೊಳಗೆ ಕಿಚ್ಚಿಡುವ |ತರಳತೆಯದೇಂ ತಂತ್ರ? - ಮಂಕುತಿಮ್ಮ ||
ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು |ತೇಲುತ್ತೆ ಭಯವ ಕಾಣದೆ ಸಾಗುತಿರಲು ||ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ |ಮೇಲ ಕೀಳಾಗಿಪುದು - ಮಂಕುತಿಮ್ಮ ||
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? |ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ ||ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ |ಸಹನೆ ವಜ್ರದ ಕವಚ - ಮಂಕುತಿಮ್ಮ ||
ಘೋರವನು ಮೋಹವನು ದೇವತೆಗಳಾಗಿಪರು |ಭೀರು ಯಾಚಕರಾಸ್ಥೆ ತಪ್ಪದಿರಲೆಂದು ||ಆರಿಂದಲೇಂ ಭೀತಿ; ಏಂ ಬಂದೊಡದ ಕೊಳುವ |ಪಾರಮಾರ್ಥಿಕನಿಗೆಲೊ? - ಮಂಕುತಿಮ್ಮ ||
ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ |ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ||ಗಗನದೊಳನಂತದರ್ಶನದೆ ಮುಕ್ತಿಯನೊಂದು |ನಗುನಗಿಸಿ ಲೋಕವನು - ಮಂಕುತಿಮ್ಮ ||
ಜ್ವರ ಬಂದು ತನು ಬೆಂದ ಯಾತನೆಯ ಮಾತೇನು? |ಉರಿಬೇಗೆಯಿಳಿಯೆ ಹೊಸ ಹೊಸಬನಾ ನರನು ||ಕರಣತಪನೆಗಳಿಳಿಯೆ; ಕಾರಣವದೇನಿರಲಿ |ಮರುಜನ್ಮವಾತ್ಮಂಗೆ - ಮಂಕುತಿಮ್ಮ ||
ತನಗೆ ಬಾರದ ಲಾಭ ತನಯಂಗೆ ಬಂದಾಗ |ಜನಕನ್ ಅದು ತನದೆಂದು ಸಂತಸಿಪ ತೆರದಿ ||ಜನದೊಳಾರ್ಗಾವ ಸೊಗವಾದೊಡಂ ತನದೆನ್ನು- |ತನುಭವಿಪನೋ ಜ್ಞಾನಿ - ಮಂಕುತಿಮ್ಮ ||
ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ |ಜಾವ ದಿನ ಬಂದು ಪೋಗುವುವು; ಕಾಲ ಚಿರ ||ಜೀವದ ವ್ಯಕ್ತಿ ಸಾಯ್ವುದು; ಜೀವಸತ್ತ್ವ ಚಿರ |ಭಾವಿಸಾ ಕೇವಲವ - ಮಂಕುತಿಮ್ಮ ||
ನಂಬದಿರ್ದನು ತಂದೆ; ನಂಬಿದನು ಪ್ರಹ್ಲಾದ |ನಂಬಿಯುಂ ನಂಬದಿರುವಿಬ್ಬಂದಿ ನೀನು ||ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು |ಸಿಂಬಳದಿ ನೊಣ ನೀನು - ಮಂಕುತಿಮ್ಮ ||