ಒಟ್ಟು 28 ಕಡೆಗಳಲ್ಲಿ , 1 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ? |ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ ||ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು |ವಿಧಿಯ ಬಗೆಯೆಂತಿಹುದೊ! - ಮಂಕುತಿಮ್ಮ ||
ಆಳವನು ನೋಡಿ ಬಗೆದಾಡುವಾ ಮಾತಿಂಗೆ |ರೂಢಿಯರ್ಥವದೊಂದು ಗೂಢಾರ್ಥವೊಂದು ||ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು |ಕೋಲು ಹುಟ್ಟೊಂದು ಬಲ - ಮಂಕುತಿಮ್ಮ ||
ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು |ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ ||
ಎಷ್ಟು ಬಗೆ ಯಂತ್ರಗಳೊಳೆಷ್ಟು ರಸಮಿಶ್ರದಿಂ |ದೆಷ್ಟಾದಿಭೂತಗಳು ಪರಿಪಾಕವೊಂದಿ ||ಒಟ್ಟು ಸೇರಿಹವು ನರನೆಂಬ ಸಿದ್ಧಿಯೊಳವನು |ಸೃಷ್ಟಿಶೈಲದ ಶಿಖರ - ಮಂಕುತಿಮ್ಮ ||
ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? |ಬಗೆದು ಬಿಡಿಸುವರಾರು ಸೋಜಿಗವನಿದನು? ||ಜಗವ ನಿರವಿಸಿದ ಕೈಯೊಂದಾದೊಡೇಕಿಂತು |ಬಗೆಬಗೆಯ ಜೀವಗತಿ? - ಮಂಕುತಿಮ್ಮ ||
ಓರೊರ್ವನಿಚ್ಛೆಗುಣವೊಂದೊಂದು ಬಗೆ ಜಗದಿ |ಭಾರಮೋರೊರ್ವನಿಂಗೊಂದೊಂದು ತೆರದಿ ||ದಾರಗಳಿನವರ ವಿಧಿ ಪಿಡಿದು ಕುಣಿದಾಡಿಸಲು |ನೂರುಜಡೆಕೋಲಾಟ - ಮಂಕುತಿಮ್ಮ ||
ಕಷ್ಟ ಜೀವದ ಪಾಕ; ಕಷ್ಟ ಧರ್ಮವಿವೇಕ |ಎಷ್ಟೆಷ್ಟು ನೀತಿಯುಕ್ತಿಗಳ ಬಗೆದಡೆಯುಂ ||ಇಷ್ಟಷ್ಟು ನಿನ್ನೊಳ್ ಒಳತಿಳಿವಿಲ್ಲದಿರೆ ನಷ್ಟ |ದೃಷ್ಟಿಸೂಕ್ಷ್ಮವೆ ಗತಿಯೊ - ಮಂಕುತಿಮ್ಮ ||
ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ |ಮುಗಿವ ತರಣಿಯ ರಕ್ತ ಹಿತವೆನಿಸದೇಕೊ! ||ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ |ಬಗೆವೆನ್ನ ಮನಸಿನೊಳೊ? - ಮಂಕುತಿಮ್ಮ ||
ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ |ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ ||ಥಳಥಳಿಕೆ ವಜ್ರದಲಿ ನೈಜವಿರುವಂತೆಯು |ಜ್ಜ್ವಲತೆ ಬೊಮ್ಮಗೆ ನೈಜ - ಮಂಕುತಿಮ್ಮ ||
ಚೂರುಗಳು ಹದಿನಾರು ಚಂದ್ರಮಂಡಲಕಂತೆ |ನೂರಾರು ಚೂರುಗಳು ಸತ್ಯಚಂದ್ರನವು ||ಸೇರಿಸುತಲವುಗಳನು ಬಗೆಯರಿತು ಬೆಳಸುತಿರೆ |ಸಾರ ಋತಪೂರ್ಣಿಮೆಯೊ - ಮಂಕುತಿಮ್ಮ ||
ಜಗ ಬೆಳೆದು ಚಿಗುರುತಿರೆ ಶಾಸ್ತ್ರ ಕರಟಿರಲಹುದೆ? |ನಿಗಮಸಂತತಿಗೆ ಸಂತತಿಯಾಗದಿಹುದೆ? ||ಬಗೆಬಗೆಯ ಜೀವಸತ್ತ್ವವಿಕಾಸವಾಗುತಿರ- |ಲೊಗೆವುದೈ ವಿಜ್ಞಾನ - ಮಂಕುತಿಮ್ಮ ||
ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು |ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು ||ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು |ಬಗೆಯಲರಿತವನೆ ಸುಖಿ - ಮಂಕುತಿಮ್ಮ ||
ಜನಕಜೆಯ ದರುಶನದಿನಾಯ್ತು ರಾವಣ ಚಪಲ |ಕನಕಮೃಗದರುಶನದೆ ಜಾನಕಿಯ ಚಪಲ ||ಜನವವನ ನಿಂದಿಪುದು; ಕನಿಕರಿಪುದಾಕೆಯಲಿ |ಮನದ ಬಗೆಯರಿಯದದು - ಮಂಕುತಿಮ್ಮ ||
ಜ್ಞೇಯದ ದ್ವೀಪಕಜ್ಞೇಯಾಬ್ಧಿಯಾವರಣ |ಕಾಯಕದ ಗಿರಿಗೆ ಮಾನಸದಭ್ರಪಟಲ ||ಮೇಯವನು ಬಗೆದೇನಮೇಯ ಸುತ್ತಲುಮಿರಲು? |ಮಾಯೆಯೀ ಮಿಶ್ರಣವೊ - ಮಂಕುತಿಮ್ಮ ||
ತನ್ನ ಮನದಾಟಗಳ ತಾನೆ ನೋಡುತ ನಗುವ |ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |ಧನ್ಯತೆಯ ಕಂಡವನು - ಮಂಕುತಿಮ್ಮ ||