ಒಟ್ಟು 156 ಕಡೆಗಳಲ್ಲಿ , 1 ವಚನಕಾರರು , 135 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು |ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ||ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು |ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ ||
ಅರಸನೊಬ್ಬನಲ್ಲ; ಮೂವರು ಬಾಳನಾಳುವರು |ನರ ಕರುಮ ದೈವಗಳು; ತೊಡಕದಕೆ ಸಾಜ ||ಗುರಿಯಿಡದ; ಮೊದಲು ಕೊನೆಯಿರದ; ದರಬಾರಿನಲಿ |ಸರಿಯೇನೊ ತಪ್ಪೇನೊ? - ಮಂಕುತಿಮ್ಮ ||
ಅರೆದಿನದ ನಮ್ಮ ಯತ್ನದಿನದೇನೆನ್ನದಿರು |ಕಿರಿದುಮೊಡಗೂಡಿರಲು ಸಿರಿಯಹುದು ಬಾಳ್ಗೆ ||ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ? |ಕಿರುಜಾಜಿ ಸೊಗಕುಡದೆ? - ಮಂಕುತಿಮ್ಮ ||
ಅಶ್ವತ್ಥವಿಲ್ಲಿ ಬಾಡಿದೊಡೇನು? ಚಿಗುರಲ್ಲಿ; |ನಶ್ವರತೆ ವಿಟಪ ಪರ್ಣಂಗಳಲಿ ಮಾತ್ರ; ||ಶಾಶ್ವತತೆ ರುಂಡಮೂಲದಲಿ; ಪರಿಚರಿಸದನು |ವಿಶ್ವಪ್ರಗತಿಯಂತು - ಮಂಕುತಿಮ್ಮ ||
ಅಹುದು ಬಾಳ್ ಭಂಡತನವಿಹದಿ ಬಾಳ್ ಮುಗಿಯುವೊಡೆ |ಕಹಿಯೊಗರು ಕಾಯಿ; ಮಿಡಿತನದೊಳದು ಮುಗಿಯೆ ||ಸಿಹಿಯಹುದು ಕಾಯಿ ಹಣ್ಣಾಗೆ; ಜೀವಿತವಂತು |ಮಹಿಮೆಗೊಳುವುದು ಮಾಗೆ - ಮಂಕುತಿಮ್ಮ ||
ಆಗಸದ ಬಾಗು; ಚಂದ್ರಮನ ಗುಂಡಿನ ನುಣ್ಪು |ಸಾಗರದ ತೆರೆವಂಕು; ಗಿಡಬಳ್ಳಿ ಬಳುಕು ||ಮೇಘವರ್ಣಚ್ಛಾಯೆ---ಯೀಸೃಷ್ಟಿಯಿಂ ನಮ್ಮೊ |ಳಾಗಿಹುದು ರೂಪರುಚಿ - ಮಂಕುತಿಮ್ಮ ||
ಆಶೆ ಬಲೆಯನು ಬೀಸಿ; ನಿನ್ನ ತನ್ನೆಡೆಗೆಳೆದು |ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ||ಮೈಸವರಿ ಕಾಲನೆಡವಿಸಿ; ಗುಟ್ಟಿನಲಿ ನಗುವ |ಮೋಸದಾಟವೊ ದೈವ - ಮಂಕುತಿಮ್ಮ ||
ಆಹ! ಈ ಮೋಹಗಳೊ ನೇಹಗಳೊ ದಾಹಗಳೊ |ಊಹಿಪೆಯ ಸೃಷ್ಟಿಯಲಿ ಹೃದಯವಿಹುದೆಂದು? ||ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ |ಈ ಹರಿಬದೊಳಗುಟ್ಟೊ? - ಮಂಕುತಿಮ್ಮ ||
ಆಳನೀಳಗಳ ಕಾಣಲ್ಕಾಗಿಸದೆ ಮೊರೆವ |ಬಾಳ ಕಡಲೊಳು ಮುಳುಗಿ ತಳದಿಂದಲೆದ್ದು ||ಪೇಳುವರದಾರು ನ್ಯಾಯಾನ್ಯಾಯ ವಿವರಗಳ |ಗಾಳಿಗಾಬರಿಯೆಲ್ಲ - ಮಂಕುತಿಮ್ಮ ||
ಇಂದ್ರಿಯಗಳೊಳು ಬಾಳಿ ಜೀವ ಪಕ್ವಂಗೊಳ್ಳ- |ಲಿಂದ್ರಿಯಂಗಳ ಮೀರಿ ಮೇಲೇರಿ ಜಾಣಿಂ- ||ದಿಂದ್ರಿಯಂಗಳನಾಳಿ ಲೋಕವಂ ಸಂತಯಿಪ |ಬಂಧು ಜೀವನ್ಮುಕ್ತ - ಮಂಕುತಿಮ್ಮ ||
ಇರುವನ್ನಮೀ ಬಾಳು ದಿಟವದರ ವಿವರಣೆಯ |ಹೊರೆ ನಮ್ಮ ಮೇಲಿಲ್ಲ ನಾದವರ ಸಿರಿಯ ||ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುದೆ |ಪುರುಷಾರ್ಥಸಾಧನೆಯೊ - ಮಂಕುತಿಮ್ಮ ||
ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್ |ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ||ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ |ಸರಿ ಲೋಕಬಾಂಧವ್ಯ - ಮಂಕುತಿಮ್ಮ ||
ಇಳಿಯುವೆನು ಮುಳುಗುವೆನು ವಿಶ್ವಾತ್ಮಸಾಗರದಿ |ಮುಳುಮುಳುಗಿ ಕಳೆಯುವೆನು ಬೇರೆತನದರಿವ ||ಇಳೆಬಾನ್ಗಳಾಟದಲಿ ಕುಣಿಯುವೆನು ಮೈಮರೆತು |ಗಳಿಸೀ ಮನಃಸ್ಥಿತಿಯ - ಮಂಕುತಿಮ್ಮ ||
ಎನಗೆ ಸುಖವಿಲ್ಲವದರಿಂ ದೇವರಿರನೆನ್ನು- |ವನುಮಿತಿಯ ನೀಂ ಗೆಯ್ಯೆ; ಸುಖಿಯದೇನೆನುವಂ? ||ತನುಬಾಹ್ಯಕರಣದನುಭವಕಿಂತ ಸೂಕ್ಷ್ಮತರ- |ದನುಭವವ ನೀನರಸೊ - ಮಂಕುತಿಮ್ಮ ||
ಎಲೆಗಳನು ಕಡ್ಡಿ; ಕಡ್ಡಿಯ ರಂಬೆಕೊಂಬೆಗಳು |ತಳೆದು ಪೆರ್ಚಿಸುತಿಹುವು ಮರದ ಬಾಳ್ಸಿರಿಯ ||ಸ್ಥಲವೊಂದು ನಿನಗಿಹುದು ವಿಶ್ವವೃಕ್ಷದೊಳಂತು |ಹಳಿಯದಿರು ನಿನ್ನಿರವ - ಮಂಕುತಿಮ್ಮ ||