ಒಟ್ಟು 18 ಕಡೆಗಳಲ್ಲಿ , 1 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಏನು ಭೈರವಲೀಲೆಯೀ ವಿಶ್ವವಿಭ್ರಮಣೆ! |ಏನು ಭೂತಗ್ರಾಮನರ್ತನೋನ್ಮಾದ! ||ಏನಗ್ನಿ ಗೋಳಗಳು! ಏನಂತರಾಳಗಳು! |ಏನು ವಿಸ್ಮಯ ಸೃಷ್ಟಿ? - ಮಂಕುತಿಮ್ಮ ||
ಒಮ್ಮನಸಿನಿಂದ ನೀನೀ ತತ್ತ್ವವಂ ಗ್ರಹಿಸು |ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ ||ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು |ನೆಮ್ಮದಿಗೆ ದಾರಿಯದು - ಮಂಕುತಿಮ್ಮ ||
ಕಾಯಮಾತ್ರದುದಲ್ಲವಾತ್ಮಮಾತ್ರದುದಲ್ಲ- |ವಾಯೆರಡುಮೊಂದಾಗಲದು ಜೀವಲೀಲೆ ||ತಾಯಿವೊಲು ನಿನಗಾತ್ಮ; ಮಡದಿವೊಲು ಕಾಯವವ- |ರಾಯವನು ಸರಿನೋಡು - ಮಂಕುತಿಮ್ಮ ||
ಕೈಕಯಿಯವೊಲು ಮಾತೆ; ಸತ್ಯಭಾಮೆವೊಲು ಸತಿ |ಸಾಕಿ ಸಂತಸವೆರೆಯೆ ಸಂಸಾರ ಲೀಲೆ ||ಬೇಕು ಮತ್ಸರ ಮಮತೆ ಮೋಹಂಗಳಾವೇಶ |ಲೋಕನಾಟಕಕಾಗಿ - ಮಂಕುತಿಮ್ಮ ||
ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ |ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ||ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ |ಲೋಲನಾಗಿರ್ಪನೆಲೊ - ಮಂಕುತಿಮ್ಮ ||
ತೆರೆಯಾಗು ವಿಶ್ವಜೀವನದ ದಿವ್ಯಾಬ್ಧಿಯಲಿ |ಕರಗಿಸದರಲಿ ನಿನ್ನ ಬೇರೆತನದರಿವ ||ಮರುತನುರುಬನು ತಾಳುತೇಳುತೋಲಾಡುತ್ತ |ವಿರಮಿಸಾ ಲೀಲೆಯಲಿ - ಮಂಕುತಿಮ್ಮ ||
ನಯನಯುಗದಿಂ ಜಗವ ಪೊರೆದು; ನಿಟಿಲಾಕ್ಷಿಯಿಂ |ಲಯವಡಿಸುವುದದೇನು ಶಿವಯೋಗಲೀಲೆ? ||ಜಯಿಸಿ ಮದನನ ಬಳಿಕ ತನ್ನೊಡಲೊಳ್ ಉಮೆಯನ- |ನ್ವಯಿಸಿಕೊಂಡಿಹುದೇನು? - ಮಂಕುತಿಮ್ಮ ||
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ |ಪ್ರತ್ಯೇಕ ಜೀವದಶೆಯವನಂಗಭಂಗಿ ||ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ |ಪ್ರತ್ಯಗಾತ್ಮನು ನೀನು - ಮಂಕುತಿಮ್ಮ ||
ನೇತ್ರಯುಗಳಂ ಪಿಡಿಗುಮೊಂದು ಲಕ್ಷ್ಯವ ಕೂಡಿ |ಹಸ್ತಯುಗ ಸಾಧಿಪುದು ಮನದರ್ಥವೊಂದನ್ ||ದ್ವೈತದಿಂದದ್ವೈತವದ್ವೈತದೊಳ್ ದ್ವೈತ |ಚೈತನ್ಯಲೀಲೆಯಿದು - ಮಂಕುತಿಮ್ಮ ||
ಪರಮಾಣುವಿಂ ಪ್ರಪಂಚಗಳ ಸಂಯೋಜಿಪುದು |ಮರೆಯಿಂದ ಸೃಷ್ಟಿಯಂತ್ರವ ಚಾಲಿಸುವುದು ||ಚರಲೀಲೆಯಲಿ ಜೀವವೆನಿಪ ಚೈತನ್ಯವದು |ಪರಸತ್ತ್ವಶಕ್ತಿಯೆಲೊ - ಮಂಕುತಿಮ್ಮ ||
ಪ್ರಾರಬ್ಧಕರ್ಮಮುಂ ದೈವಿಕದ ಲೀಲೆಯುಂ |ತೋರುವುವದೃಷ್ಟವಿಧಿಯೆಂಬ ಪೆಸರುಗಳಿಂ ||ಆರುಮಳೆವವರಿಲ್ಲವವುಗಳಾವೇಗಗಳ |ಪೌರುಷವು ನವಸತ್ತ್ವ - ಮಂಕುತಿಮ್ಮ ||
ಬದುಕು ಕದನದ ತೆರನೆ; ನೋಡೆ ಲೀಲೆಯ ಕದನ |ಮೊದಲುಮುಗಿವುಗಳಿರದ ಚಿತ್ರಲೀಲೆಯದು ||ಇದರೊಳೆಂದಿಗುಮಿರದು ಸೋಲ್ಗೆಲವು ಕಡೆಯೆಣಿಕೆ |ಸದರದಾಟವೆ ಮುಖ್ಯ - ಮಂಕುತಿಮ್ಮ ||
ಮೂಲವಸ್ತುವದೊಂದು ಲೀಲೆಗೋಸುಗ ನೂರು |ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ||ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯದ ತಾಳಿ |ಆಳುತಿರು ಜೀವನವ - ಮಂಕುತಿಮ್ಮ ||
ಲೀಲೆಯೇಂ ಬಾಳೆಲ್ಲ? ಛೀ ತಳ್ಳು ಹಾಸ್ಯವನು |ಬಾಲರೇಂ ನಾವಿನ್ನುಮೆನುತ ಪಲ್ಕಡಿದು ||ಖೇಲನವ ಬೇಡವೆನುವರನು ವಿಧಿರಾಯನವ--- |ಹೇಳಿಪನು ಸೆರೆವಿಡಿದು - ಮಂಕುತಿಮ್ಮ ||
ಲೋಕವೆಲ್ಲವು ದೈವಲೀಲೆಯೆಂಬರೆ; ಪೇಳಿ |ಶೋಕ ಸೋಂಕಿರದೊಡಾ ಲೀಲೆ ನೀರಸವೇಂ? ||ಮೂಕಂಗೆ ಕಳ್ ಕುಡಿಸಿ ಚೇಳ್ ಕುಟಕಿಪಾಟವಿದು |ಏಕಪಕ್ಷದ ಲೀಲೆ - ಮಂಕುತಿಮ್ಮ ||