ಒಟ್ಟು 35 ಕಡೆಗಳಲ್ಲಿ , 1 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಮೃತಕಣವಂ ಮರ್ತ್ಯಮೃದ್ಘಟದಿ ಬಯ್ತಿರಿಸಿ |ವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿ ||ಸಾಮ್ರಾಜ್ಯಮಧ್ಯದಲಿ ದುರ್ಭಿಕ್ಷವಾಗಿಪುದು |ಕಮ್ರತೆಯೊ ನಮ್ರತೆಯೊ? - ಮಂಕುತಿಮ್ಮ ||
ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ |ಅವನ ವೇಷಗಳೇಕೆ ಮಾರ್ಪಡುತಲಿಹವು? ||ತವಕಪಡನೇತಕೋ ಕುರುಹ ತೋರಲು ನಮಗೆ |ಅವಿತುಕೊಂಡಿಹುದೇಕೊ? - ಮಂಕುತಿಮ್ಮ ||
ಅಹುದು ಬಾಳ್ ಭಂಡತನವಿಹದಿ ಬಾಳ್ ಮುಗಿಯುವೊಡೆ |ಕಹಿಯೊಗರು ಕಾಯಿ; ಮಿಡಿತನದೊಳದು ಮುಗಿಯೆ ||ಸಿಹಿಯಹುದು ಕಾಯಿ ಹಣ್ಣಾಗೆ; ಜೀವಿತವಂತು |ಮಹಿಮೆಗೊಳುವುದು ಮಾಗೆ - ಮಂಕುತಿಮ್ಮ ||
ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್ |ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ||ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ |ಸರಿ ಲೋಕಬಾಂಧವ್ಯ - ಮಂಕುತಿಮ್ಮ ||
ಉದರದೈವಕೆ ಜಗದೊಳೆದುರು ದೈವವದೆಲ್ಲಿ? |ಮೊದಲದರ ಪೂಜೆ; ಮಿಕ್ಕೆಲ್ಲದವರಿಂದ ||ಮದಿಸುವುದದಾದರಿಸೆ; ಕುದಿವುದು ನಿರಾಕರಿಸೆ |ಹದದೊಳಿರಿಸುವುದೆಂತೊ? - ಮಂಕುತಿಮ್ಮ ||
ಏನೆ ನಿಜವಿರಲಿ ಮತ್ತೇನೆ ಸುಳ್ಳಾಗಿರಲಿ |ನಾನೆನಿಪ್ಪಾತ್ಮವೊಂದಿರುವುದನುಭವಿಕ ||ಹಾನಿಗಾವಾತನಾತ್ಮವನುಮಂ ಕೆಡಹದಿರು |ಧ್ಯಾನಿಸಾತ್ಮದ ಗತಿಯ - ಮಂಕುತಿಮ್ಮ ||
ಒಡೆಯದಿರು ತಳಹದಿಯ ಸರಿವಡಿಪೆನದನೆಂದು |ಸಡಲಿಸುವ ನೀಂ ಮರಳಿ ಕಟ್ಟಲರಿತವನೇಂ? ||ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ? |ದುಡುಕದಿರು ತಿದ್ದಿಕೆಗೆ - ಮಂಕುತಿಮ್ಮ ||
ಕಲೆಗಳಲಿ ಪರಮಕಲೆ ಜೀವನದ ಲಲಿತಕಲೆ |ಕಲಿಸಲದನಳವಲ್ಲ ಬಾಹ್ಯಬೋಧನೆಯಿಂ ||ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ |ತಿಳಿವುದೊಳಹದದಿಂದ - ಮಂಕುತಿಮ್ಮ ||
ಕುದಿ ಹೆಚ್ಚೆ ವೆಗಟ ಹುದು; ಕಡಮೆಯಿರೆ ಹಸಿನಾತ |ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ||ಅದರವೊಲೆ ಮನದ ಹದ; ಅದನೆಚ್ಚರದಿ ನೋಡು |ಬದುಕು ಸೊಗ ಹದದಿಂದ - ಮಂಕುತಿಮ್ಮ ||
ಕೊಲೆಗಡಿಕನೆನಿಪ ಹುಲಿ ಸಲಹದೇಂ ಮರಿಗಳನು? |ಒಲುಮೆಕರುಳಡಗಿಹುದು ಪಗೆತನದ ಪೊಡೆಯೊಳ್ ||ನಲುಮೆಯನು ಹೊರಹೊಮ್ಮಿಸುವುದು ನರನುನ್ನತಿಕೆ |ಒಲವಾತ್ಮ ವಿಸ್ತರಣ - ಮಂಕುತಿಮ್ಮ ||
ಗಣನೆಗೆಟುಕದ ಗುಣಗಳಾತ್ಮದವವರ್ಣ್ಯಗಳು |ಮನದ ದೇಹದ ಜೀವದೆಲ್ಲ ಕರಣಗಳಾ ||ಅನುಭವದ ಮುಕುರದೊಳ್ ಪ್ರತಿಫಲಿಸೆ ತನ್ನದೊಂ- |ದಣುವದುವೆ ಸುಂದರವೊ - ಮಂಕುತಿಮ್ಮ ||
ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ |ವಿಹಿತದ ಸ್ಥಾನದಿಂ ಸಹಜಗುಣಬಲದಿಂ- ||ದಿಹಪರಸಮನ್ವಯದೆ ಸರ್ವಹಿತಸಂಸ್ಥಿತಿಗೆ |ಸಹಕರಿಪುದಲೆ ಧರ್ಮ - ಮಂಕುತಿಮ್ಮ ||
ಚೂರುಗಳು ಹದಿನಾರು ಚಂದ್ರಮಂಡಲಕಂತೆ |ನೂರಾರು ಚೂರುಗಳು ಸತ್ಯಚಂದ್ರನವು ||ಸೇರಿಸುತಲವುಗಳನು ಬಗೆಯರಿತು ಬೆಳಸುತಿರೆ |ಸಾರ ಋತಪೂರ್ಣಿಮೆಯೊ - ಮಂಕುತಿಮ್ಮ ||
ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ |ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ||ಗಗನದೊಳನಂತದರ್ಶನದೆ ಮುಕ್ತಿಯನೊಂದು |ನಗುನಗಿಸಿ ಲೋಕವನು - ಮಂಕುತಿಮ್ಮ ||
ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು |ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು ||ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ |ಮಾನವತೆ ನಿಂತಿಹುದು - ಮಂಕುತಿಮ್ಮ ||