ಒಟ್ಟು 14 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಒಮ್ಮೆ ಹೂದೋಟದಲಿ; ಒಮ್ಮೆ ಕೆಳೆಕೂಟದಲಿ |ಒಮ್ಮೆ ಸಂಗೀತದಲಿ; ಒಮ್ಮೆ ಶಾಸ್ತ್ರದಲಿ ||ಒಮ್ಮೆ ಸಂಸಾರದಲಿ; ಮತ್ತೊಮ್ಮೆ ಮೌನದಲಿ |ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ ||
ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ |ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ ||ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ |ವಣುವಣುವೆ ಬಿಗಿಯುವುವೊ - ಮಂಕುತಿಮ್ಮ ||
ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? |ಮತಿಮನಂಗಳ ಕೃಷಿತಪಃಫಲವುಮಂತು ||ಸತತಕೃಷಿ; ಬೀಜಗುಣ; ಕಾಲವರ್ಷಗಳೊದವೆ |ಪ್ರತಿಭೆ ವಿಕಸಿತವಹುದೊ - ಮಂಕುತಿಮ್ಮ ||
ಗಗನ ತಲೆನವಿರಾಗೆ ಪೆರೆತಾರೆ ಹೂವಾಗೆ |ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ||ನಗುನಗುವ ಬೊಬ್ಬಿಡುವ ಜೀವತಾಂಡವರಸಿಕ |ಭಗವಂತ ಶಿವರುದ್ರ - ಮಂಕುತಿಮ್ಮ ||
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ |ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ||ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ |ಬಿಡಿಗಾಸು ಹೂವಳಗೆ - ಮಂಕುತಿಮ್ಮ ||
ದೇವನೇನತಿಶಯಿತಮಾನಿಸನೆ ಭೋಗಕ್ಕೆ? |ಹೂವುಣಿಸು ಮುಡುಪೊಡವೆಯವನಿಗಂ ಬೇಕೆ? ||ಆವುದೊಳ್ಳಿತೊ ತನಗೆ ನರನದನು ಪರಮಂಗೆ |ನೈವೇದಿಪುದು ಸಾಜ - ಮಂಕುತಿಮ್ಮ ||
ನೋಡುನೋಡುತ ಲೋಕಸಹವಾಸ ಸಾಕಹುದು |ಬಾಡುತಿಹ ಹೂಮಾಲೆ; ಗೂಢವಿಹ ಕಜ್ಜಿ ||ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ |ನೋಡಾಡು ಹಗುರದಿಂ - ಮಂಕುತಿಮ್ಮ ||
ಪರದ ಮೇಲ್ಕಣ್ಣಿಟ್ಟು ಧರೆಯ ತುಚ್ಛವೆನುತ್ತ |ತೊರೆದಾಯಸಂಗೊಳ್ಳೆ ದೊರೆವ ಫಲವೇನು? ||ಸುರಧನುವಿಗೇಣಿಯಿಡಹೊರಟು ನಿನ್ನಂಗಳದ |ಕಿರಿಹೂವ ಮರೆಯುವೆಯ - ಮಂಕುತಿಮ್ಮ ||
ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ |ಆಭಾಸವನು ಸತ್ಯವೆಂದು ಬೆಮಿಸುವುದುಮ್ ||ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ |ಅಭಿಶಾಪ ನರಕುಲಕೆ - ಮಂಕುತಿಮ್ಮ ||
ಹೂವ ತಳೆದ ಗುಲಾಬಿಯಿಂದ ಮನಕಹುದೇನು? |ನೋವೊ? ಸಂತಸವೊ? ನೋಡಾಮುಳ್ಳು ಬಾಳ್ಗೆ ||ಹೂವೆ ದಿವ್ಯಕಿರೀಟವದುವೆ ಕಾಲಕಟಾಕ್ಷ |ಜೀವನದ ತಿರುಳಷ್ಟೆ - ಮಂಕುತಿಮ್ಮ ||