ಪ್ರಾರಂಭ ಪದದ ಹುಡುಕು
ಆವ ಋಣಕೋಸುಗವೊ; ಆರ ಹಿತಕೋಸುಗವೊ |ಆವಾವ ಕಾರಣಕೊ; ಆವ ಯೋಜನೆಗೋ ||ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೆ? |ದೈವ ಕುರುಡೆನ್ನದಿರು - ಮಂಕುತಿಮ್ಮ ||
ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ! |ಆವಾಗಳಾವಕಡೆಗೆರಗುವುದೊ ಹಕ್ಕಿ! ||ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ |ಜೀವಮಾರ್ಗವನೂಹ್ಯ - ಮಂಕುತಿಮ್ಮ ||
ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ! |ಆವ ಧೂಳಿನೊಳಾವ ಚೈತನ್ಯಕಣವೋ! ||ಜೀವವಿಂತಜ್ಞಾನ ಸೂತ್ರದಾಟದ ಬೊಂಬೆ |ಭಾವಿಸಾ ಸೂತ್ರಗಳ - ಮಂಕುತಿಮ್ಮ ||
ಆವ ಜನ್ಮದ ಋಣವೊ; ಆವ ಕರ್ಮದ ಕಣವೊ |ಮಾವಾಗಿ ಬೇವಾಗಿ ಸಂಸಾರ ವನದಿ ||ಜೀವಕೀಂಟಿಪುವು ಮಾದಕದ ರಸಪಾನಗಳ |ಭಾವಜ್ವರಂಗಳವು - ಮಂಕುತಿಮ್ಮ ||
ಆವ ಜೀವದ ಪಾಕವಾವನುಭವದಿನಹುದೊ! |ಆವ ಪಾಪಕ್ಷಯವದಾವ ಪುಣ್ಯದಿನೋ! ||ಕಾವಿರದೆ ಪಕ್ವವಹ ಜೀವವಿಳೆಯೊಳಗಿರದು |ನೋವೆಲ್ಲ ಪಾವಕವೊ - ಮಂಕುತಿಮ್ಮ ||
ಆವ ನೆಲದಲಿ ಮೇದೊ; ಆವ ನೀರನು ಕುಡಿದೊ |ಆವು ಹಾಲ್ಗರೆವುದದನಾರು ಕುಡಿಯುವನೋ! ||ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! |ಭಾವಿಸಾ ಋಣಗತಿಯ - ಮಂಕುತಿಮ್ಮ ||
ಆವ ಬೇಳೆಯದಾವ ನೀರಿನಲಿ ಬೇಯುವುದೊ! |ಆವ ಜೀವದ ಪಾಕವಾವ ತಾಪದಿನೋ! ||ಆ ವಿವರವನು ಕಾಣದಾಕ್ಷೇಪಣೆಯದೇನು? |ದೈವಗುಟ್ಟದು ತಿಳಿಯೆ - ಮಂಕುತಿಮ್ಮ ||
ಆವುದರಿನಾವಾಗ ದೈವ ತಾನೊಲಿದೀತೊ? |ಪೂರ್ವಿಕದ ನಿಯತಿಯನದೆಂದು ಸಡಲಿಪುದೋ? ||ಭಾವಿಸುಕೃತವದೆಂದು ಪೂರ್ವದುರಿತಕೆ ಮಿಗಿಲೊ? |ದೈವಿಕರಹಸ್ಯವದು - ಮಂಕುತಿಮ್ಮ ||
ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು? |ಅವುದಬ್ಧಿಯ ತೆರೆಗಳಲಿ ಮೊಟ್ಟಮೊದಲು? ||ಆವುದೆಲರಿನ ನಿಲ್ಲದಲೇತಕ್ಕೆ ಗಡುಸೀಮೆ? |ಈ ವಿಶ್ವಕಥೆಯಂತು - ಮಂಕುತಿಮ್ಮ ||
ಆವುದೋ ಒಳಿತೆಂದು ಆವುದೋ ಸೊಗವೆಂದು |ಆವಾವ ದಿಕ್ಕಿನೊಳಮಾವಗಂ ಬೆದಕಿ ||ಜೀವ ಪರಿಧಾವಿಪವೊಲ್ ಆಗಿಪಂತರ್ವೃತ್ತಿ |ಭಾವುಕದ ನೆಲೆಯ ಕರೆ - ಮಂಕುತಿಮ್ಮ ||
ಆಶೆ ಬಲೆಯನು ಬೀಸಿ; ನಿನ್ನ ತನ್ನೆಡೆಗೆಳೆದು |ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ||ಮೈಸವರಿ ಕಾಲನೆಡವಿಸಿ; ಗುಟ್ಟಿನಲಿ ನಗುವ |ಮೋಸದಾಟವೊ ದೈವ - ಮಂಕುತಿಮ್ಮ ||
ಆಶೆ ಮಂಥರೆ; ನರವಿವೇಚನೆಯೆ ಕೈಕೇಯಿ |ಬೀಸೆ ಮನದುಸಿರು ಮತಿದೀಪವಲೆಯುವುದು ||ವಾಸನೆಗಳನುಕೂಲ ಸತ್ಯತರ್ಕತೆ ಶೂಲ |ಶೋಷಿಸಾ ವಾಸನೆಯ - ಮಂಕುತಿಮ್ಮ ||
ಆಶೆಗಳ ಕೆಣಕದಿರು; ಪಾಶಗಳ ಬಿಗಿಯದಿರು |ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||ಬೇಸರದ ಪಾತಕಸ್ಮೃತಿಯ ಚುಚ್ಚದಿರ್; ಎನ್ನು- |ತೀಶನನು ಬೇಡುತಿರೊ - ಮಂಕುತಿಮ್ಮ ||
ಆಹ! ಈ ಮೋಹಗಳೊ ನೇಹಗಳೊ ದಾಹಗಳೊ |ಊಹಿಪೆಯ ಸೃಷ್ಟಿಯಲಿ ಹೃದಯವಿಹುದೆಂದು? ||ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ |ಈ ಹರಿಬದೊಳಗುಟ್ಟೊ? - ಮಂಕುತಿಮ್ಮ ||
ಆಳನೀಳಗಳ ಕಾಣಲ್ಕಾಗಿಸದೆ ಮೊರೆವ |ಬಾಳ ಕಡಲೊಳು ಮುಳುಗಿ ತಳದಿಂದಲೆದ್ದು ||ಪೇಳುವರದಾರು ನ್ಯಾಯಾನ್ಯಾಯ ವಿವರಗಳ |ಗಾಳಿಗಾಬರಿಯೆಲ್ಲ - ಮಂಕುತಿಮ್ಮ ||