ಪ್ರಾರಂಭ ಪದದ ಹುಡುಕು
ಯತನ ಕರ್ತವ್ಯವದು; ನಮಗೆ ವಿದ್ಯಾಭ್ಯಾಸ |ಹಿತಪರಿಜ್ಞಾನ ಯತ್ನಾನುಭವ ಫಲಿತ ||ಸತತಯತ್ನದಿನಾತ್ಮಶಕ್ತಿ ಪರಿವರ್ಧಿಪುದು |ಯತನ ಜೀವನಶಿಕ್ಷೆ - ಮಂಕುತಿಮ್ಮ ||
ಯಮನಿಗೇಕಪಕೀರ್ತಿ? ನರರು ಬಲು ಕರುಣಿಗಳೆ? |ಮಮತೆಯಿನೊ ರೋಷದಿನೊ ಹಾಸ್ಯದಿನೊ ಹೇಗೋ ||ನಿಮಿಷನಿಮಿಷಮುಮೊರ್ವನಿನ್ನೊರ್ವನನು ತಿಕ್ಕಿ |ಸಮೆಯಿಸುವನಾಯುವನು - ಮಂಕುತಿಮ್ಮ ||
ಯಾತ್ರಿಕರು ನಾವು; ದಿವ್ಯಕ್ಷೇತ್ರವೀ ಲೋಕ |ಸತ್ರದಲಿ ನೇಮದಿಂದಿರಲಿಕೆಡೆಯುಂಟು ||ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ; ಪಾರು- |ಪತ್ಯದವ ಮೆಚ್ಚುವನು - ಮಂಕುತಿಮ್ಮ ||
ಯುಕ್ತಿಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ |ಶಕ್ತಿ ಚತುರತೆಯುಡುಗಿ ನೀನು ಸೋತಂದು ||ಉತ್ಕ್ರಮಣದರೆಮನದಿ ದೈವವನು ಪಿಡಿದೇನು? |ಭಕ್ತಿ ರಕ್ತದಿ ಪರಿಗೆ - ಮಂಕುತಿಮ್ಮ ||
ಯುದ್ಧವಾಗಲಿ ರಾಜ್ಯವಿದ್ಯೆಯಾಗಲಿ ಶಾಸ್ತ್ರ- |ವೃದ್ಧಿಯಾಗಲಿ ನರನ ಹಣೆಯಿನಳಿಯಿಸದಾ ||ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆ- |ಯಿದ್ದೆಯಿರುವುದು ನಮಗೆ - ಮಂಕುತಿಮ್ಮ ||