ಪ್ರಾರಂಭ ಪದದ ಹುಡುಕು
ಋಣದ ಜಾಲವನಂತ; ಕರುಮಚಕ್ರವನಂತ |ಜನುಮಜನುಮದ ಕಥೆಯ ತಂತುಗಳನಂತ ||ಅನವರತ ನೂತನವಿದೆನಿಪ ವಿಶ್ವದ ತಂತ್ರ |ಬಿನದ ಪರಬೊಮ್ಮಂಗೆ - ಮಂಕುತಿಮ್ಮ ||
ಋಣದ ಮೂಟೆಯ ಹೊರಿಸಿ; ಪೂರ್ವಾರ್ಜಿತದ ಹುರಿಯ |ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು ||ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆ |ಕುಣಿವ ಗರ್ದಭ ನೀನು - ಮಂಕುತಿಮ್ಮ ||
ಋಣವ ತೀರಿಸಬೇಕು; ಋಣವ ತೀರಿಸಬೇಕು |ಋಣವ ತೀರಿಸುತ ಜಗದಾದಿಸತ್ತ್ವವನು ||ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು |ಮನೆಯೊಳಗೆ ಮಠ ನಿನಗೆ - ಮಂಕುತಿಮ್ಮ ||
ಋತುಚಕ್ರ ತಿರುಗುವುದು; ಕಾಲನೆದೆ ಮರುಗುವುದು |ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ||ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ |ಸತತ ಕೃಷಿಯೋ ಪ್ರಕೃತಿ - ಮಂಕುತಿಮ್ಮ ||