ಪ್ರಾರಂಭ ಪದದ ಹುಡುಕು
ಸಂಕೇತಭಾವಮಯ ಲೋಕಜೀವನದ ನಯ |ಸಂಖ್ಯೆ ಗುಣ ಹೇತು ಕಾರ್ಯಗಳ ಲಕ್ಷಣದಿಂ- ||ದಂಕಿತಂಗಳು ಪದ ಪದಾರ್ಥ ಸಂಬಂಧಗಳು |ಅಂಕೆ ಮೀರ್ದುದು ಸತ್ತ್ವ - ಮಂಕುತಿಮ್ಮ ||
ಸಕ್ಕರೆಯ ಭಕ್ಷ್ಯವನು ಮಕ್ಕಳೆದುರಿಗೆ ಕೈಗೆ |ಸಿಕ್ಕುವಂತಿರಿಸಿ ಕದ್ದರೆ ಗದ್ದರಿಪುದೇಂ? ||ತಕ್ಕುದಲ್ಲದಪೇಕ್ಷೆಗೇಕೆ ಮದ್ಯವ ಕುಡಿಸು- |ತುಕ್ಕಿಸುವನದನು ವಿಧಿ? - ಮಂಕುತಿಮ್ಮ ||
ಸಂಗೀತ ತಲೆದೂಗಿಪುದು; ಹೊಟ್ಟೆ ತುಂಬೀತೆ? |ತಂಗದಿರನೆಸಕ ಕಣ್ಗಮೃತ; ಕಣಜಕದೇಂ? ||ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ |ಪೊಂಗುವಾತ್ಮವೆ ಲಾಭ - ಮಂಕುತಿಮ್ಮ ||
ಸಂಗೀತಕಲೆಯೊಂದು; ಸಾಹಿತ್ಯಕಲೆಯೊಂದು |ಅಂಗಾಂಗ ಭಾವ ರೂಪಣದ ಕಲೆಯೊಂದು ||ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ |ಮಂಗಳೋನ್ನತ ಕಲೆಯೊ - ಮಂಕುತಿಮ್ಮ ||
ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ |ಬಚ್ಚಿಡುವುದದನು ಜೀವಿತೆಯ ಮಾಯಿಕತೆ ||ಇಕ್ಷುವೊಲ್ ಜೀವ; ಗಾಣದವೊಲ್ ಜಗನ್ಮಾಯೆ |ನಿಚ್ಚವಿಳೆಯಾಲೆಮನೆ - ಮಂಕುತಿಮ್ಮ ||
ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ- |ದಂತರಂಗದ ಕಡಲು ಶಾಂತಿಗೊಳಲಹುದು ||ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |ಸಂತಯಿಸು ಚಿತ್ತವನು - ಮಂಕುತಿಮ್ಮ ||
ಸತತಮಾರ್ಗಣೆ; ಸಿದ್ಧಿಯಂತಿರಲಿ; ಮಾರ್ಗಣೆಯೆ |ಗತಿ ಮನುಜಲೋಕಕ್ಕೆ; ಜಗದ ಜೀವವದು ||ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ |ಕಥೆ ಮುಗಿವುದಲ ಜಗಕೆ? - ಮಂಕುತಿಮ್ಮ ||
ಸತ್ತವೆನ್ನಾಶೆಗಳು; ಗೆದ್ದೆನಿಂದ್ರಿಯಗಣವ |ಚಿತ್ತವಿನ್ನಲುಗದೆಂಬಾ ಜಂಬ ಬೇಡ ||ಎತ್ತಣಿಂದಲೊ ಗಾಳಿ ಮೋಹಬೀಜವ ತಂದು |ಬಿತ್ತಲಾರದೆ ಮನದಿ? - ಮಂಕುತಿಮ್ಮ ||
ಸತ್ತೆನೆಂದೆನಬೇಡ; ಸೋತೆನೆಂದೆನಬೇಡ |ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ||ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು |ಮತ್ತೆ ತೋರ್ಪುದು ನಾಳೆ - ಮಂಕುತಿಮ್ಮ ||
ಸತ್ಯ ಶಿವ ಸುಂದರದ ಸಚ್ಚಿದಾನಂದನದ |ಭಿತ್ತಿಯಲಿ ಬಣ್ಣಬಣ್ಣದ ಜೀವಚಿತ್ರ ||ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ |ವೃತ್ತಿ ತನ್ಮಯವಹುದೊ - ಮಂಕುತಿಮ್ಮ ||
ಸತ್ಯವಂತನನರಸಲೆನುತ ಪೇಟೆಗಳೊಳಗೆ |ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು ||ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು |ತಾತ್ತ್ವಿಕ ಡಯೋಜೆನಿಸ್ - ಮಂಕುತಿಮ್ಮ ||
ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ |ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |ತತ್ತ್ವದರ್ಶನವಹುದು - ಮಂಕುತಿಮ್ಮ ||
ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ? |ನೃತ್ಯವೇ ಸತ್ಯವಲ ಕಡಲಲೆಯ ಬಾಳೊಳ್ ||ಮಿಥ್ಯೆಯೆಂಬುದೆ ಮಿಥ್ಯೆ; ಜೀವನಾಟಕ ಸತ್ಯ |ಕೃತ್ಯವಿದು ಬೊಮ್ಮನದು - ಮಂಕುತಿಮ್ಮ ||
ಸತ್ಯವೆಂಬುದದೇನು ಸೈನಿಕನ ಜೀವನದಿ? |ಕತ್ತಿಯವನಿಗೆ ಸತ್ಯವದರಿಂದ ಧರ್ಮ ||ಭುಕ್ತಿಸುಪ್ತಿಗಳ ವಿಭವಂಗಳವನಿಗೆ ಮಿಥ್ಯೆ |ಸಾರ್ಥಕತೆಯಿಂ ಸತ್ಯ - ಮಂಕುತಿಮ್ಮ ||
ಸತ್ಯಾನುಭವವೆಲ್ಲರಿಂಗಮೊಂದೆಂತಹುದು? |ಬೆಟ್ಟದಡಿಯೊಳಗೊಬ್ಬ; ಕೋಡಬಳಿಯೊಬ್ಬ ||ಎತ್ತರದ ದೃಶ್ಯ ಕಣಿವೆಯೊಳಿಹನಿಗಾದೀತೆ? |ನೇತ್ರದಂದದೆ ನೋಟ - ಮಂಕುತಿಮ್ಮ ||