ಪ್ರಾರಂಭ ಪದದ ಹುಡುಕು
ರಣದಿ ಬಿದ್ದಾ ಸೈನ್ಯಪತಿ ಸಿಡ್ನಿಯುತ್ಕ್ರಮಣ- |ದೊಣಗುಬಾಯಿಗೆ ನೀರನೊಡ್ಡಲ್ ಅದನವನು ||ತನಗಿಂತ ಕೆಲದ ಭಟಗದು ಸಲ್ವುದೆಂದಿತ್ತು |ತಣಿವನಾಂತುದ ನೆನೆಯೊ - ಮಂಕುತಿಮ್ಮ ||
ರದನೋದಯಜ್ವರಕೆ ಸಿಲುಕದಿಹ ಶಿಶುವಿರದು |ವಿಧಿಯೊದೆಗೆ ಸಿಕ್ಕದಿಹ ನರಜಂತುವಿರದು ||ಒದೆಪೆಟ್ಟು ಮುಗಿದಂದು ರಾಹುದಂಷ್ಟ್ರದೆ ಹೊರಟ |ವಿಧುಬಿಂಬವೋ ನೀನು - ಮಂಕುತಿಮ್ಮ ||
ರವಿ ನಿಲದೆ ಸುತ್ತುತಿರೆ ಕೊರಗು ಕಳವಳವೇಕೊ? |ಸವೆಯಿಸುತಲೆಲ್ಲವನು ಕಡೆಗೊಯ್ವನವನು ||ಕವಳಿಸುವುದೆಲ್ಲವನು ಮರೆವು; ಬಾಳೊಳ್ ಅದೊಂದು |ಶಿವಕೃಪೆಯ ಲಕ್ಷಣವೊ - ಮಂಕುತಿಮ್ಮ ||
ರವಿಮಾತ್ರದಿಂದಲ್ಲ ಭುವಿಮಾತ್ರದಿಂದಲ್ಲ |ಭುವನಪೋಷಣೆಯುಭಯ ಸಹಕಾರದಿಂದ ||ವಿವಿಧ ಶಕ್ತಿರಸಂಗಳೇಕೀಭವಿಸೆ ಜೀವ |ಅವಿತರ್ಕ್ಯ ಸೂಕ್ಷ್ಮವದು - ಮಂಕುತಿಮ್ಮ ||
ರಸರುಚಿಗಳನು ಕಲಿಸಿ ಪಕ್ವಾನ್ನಗಳ ಪಚಿಸಿ |ರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿ ||ದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರು |ವಶನಾಗದಿಹ ನರನು? - ಮಂಕುತಿಮ್ಮ ||
ರಾಗಿಮುದ್ದೆಯ ನುಂಗಿ ನಲಿದು ಬಾಳ್ವಾತಂಗೆ |ಕಾಗೆ ಕದ್ದುಣುವ ಭಕ್ಷ್ಯವ ಕಂಡು ಕರುಬೆ? ||ನೀಗುವುದು ಹಸಿವನ್ ಉಣಿಸೆಂತಪ್ಪುದಾದೊಡಂ |ಬಾಗಿಸದಿರಾತ್ಮವನು - ಮಂಕುತಿಮ್ಮ ||
ರಾಮಕಾರ್ಮುಕ; ಕೃಷ್ಣಯುಕ್ತಿ; ಗೌತಮಕರುಣೆ |ಭೂಮಿಭಾರವನಿಳುಹೆ ಸಾಲದಾಗಿರಲು ||ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? |ಕ್ಷೇಮವೆಂದುಂ ಮೃಗ್ಯ - ಮಂಕುತಿಮ್ಮ ||
ರಾಮಣೀಯಕದಿ ನಲಿವಕ್ಷಿಯೊಡನಚಲಮನ |ಪ್ರೇಮಮಯಮನದೊಡನೆ ಮೋಹಬಡದಾತ್ಮ ||ಭೀಮಬಲದೊಡನೆ ರಾಮನ ಅಭಯ ನಿಯಮವಿರೆ |ಯಾಮಳ ವರಂಗಳವು - ಮಂಕುತಿಮ್ಮ ||
ರಾಮನಡಿಯಿಟ್ಟ ನೆಲ; ಭೀಮನುಸಿರಿದ ಗಾಳಿ |ವ್ಯೋಮದೆ ಭಗೀರಥಂ ತಂದ ಸುರತಟಿನಿ |ಸೋಮನಂ ಪೆತ್ತ ಕಡಲೀ ಪುರಾತನಗಳಿರೆ |ನಾಮೆಂತು ಹೊಸಬರೆಲೊ - ಮಂಕುತಿಮ್ಮ ||
ರಾಮನಿರ್ದಂದು ರಾವಣನೊಬ್ಬನಿರ್ದನಲ |ಭೀಮನಿರ್ದಂದು ದುಶ್ಯಾಸನನದೊರ್ವನ್ ||ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು? |ರಾಮಭಟನಾಗು ನೀಂ - ಮಂಕುತಿಮ್ಮ ||
ರಾಮನುಂ ಭರತನುಂ ತಬ್ಬಿಕೊಂಡತ್ತಂದು |ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿದಂದು ||ಸೀಮೆಯಂ ಮುಟ್ಟಿತಲ ಬಾಂಧವ್ಯಸೌಂದರ್ಯ |ಕ್ಷೇಮವದು ಜೀವಕ್ಕೆ - ಮಂಕುತಿಮ್ಮ ||
ರಾಮನುಚ್ಛ್ವಾಸವಲೆದಿರದೆ ರಾವಣನೆಡೆಗೆ? |ರಾಮನುಂ ದಶಕಂಠನೆಲರನುಸಿರಿರನೆ? ||ರಾಮರಾವಣರುಸಿರ್ಗಳಿಂದು ನಮ್ಮೊಳಗಿರವೆ? |ಭೂಮಿಯಲಿ ಪೊಸತೇನೊ? - ಮಂಕುತಿಮ್ಮ ||
ರಾಯ ಮುದಿದಶರಥನನಾಡಿಸುತ ಕೈಕೇಯಿ |ಸ್ವೀಯ ವಶದಲಿ ಕೋಸಲವನಾಳಿದಂತೆ ||ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ |ಕಾಯುವಳು ತನ್ನಿಚ್ಛೆ - ಮಂಕುತಿಮ್ಮ ||
ರಾವಣನ ದಶಶಿರವದೇಂ? ನರನು ಶತಶಿರನು |ಸಾವಿರಾಸ್ಯಗಳನೊಂದರೊಳಣಗಿಸಿಹನು ||ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ |ಭೂವ್ಯೋಮಕತಿಶಯನು - ಮಂಕುತಿಮ್ಮ ||
ರಾವಣನ ಹಳಿವವನೆ; ಜೀವವನೆ ಬಿಸುಡಿಸುವ |ಲಾವಣ್ಯವೆಂತಹುದೊ? ನೋವದೆಂತಹುದೊ? ||ಬೇವಸವ ಪಟ್ಟು ತಿಳಿ; ತಿಳಿದು ಹಳಿಯುವೊಡೆ ಹಳಿ |ಗಾವಿಲನ ಗಳಹೇನು? - ಮಂಕುತಿಮ್ಮ ||